ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ
ಮಂಡ್ಯ : ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಕೃಷ್ಣ ಅಲಿಯಾಸ್ ಹರೆ ಕೃಷ್ಣ, ಸೋಮಶೇಖರ ಅಲಿಯಾಸ್ ಪಾಟೀಲ್ ಹಾಗೂ ಗುರು ಎಂಬವರು ಬಂಧಿತರು. ಆರೋಪಿಗಳಿಂದ ಭ್ರೂಣ ಪತ್ತೆಗೆ ಬಳಸುತ್ತಿದ್ದ ಎರಡು ಸ್ಕ್ಯಾನಿಂಗ್ ಯಂತ್ರಗಳು ಮತ್ತು ಒಂದು ಕಾರನ್ನು ತನಿಖಾ ತಂಡವು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣಗಳಲ್ಲಿ ಈಗಾಗಲೇ 12 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಸ್ಕ್ಯಾನಿಂಗ್ ಉಪಕರಣಗಳು ಹಾಗೂ ಮೂರು ಕಾರುಗಳನ್ನು ಮತ್ತು ಮೊಬೈಲ್‌ಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.
12 ಜನ ಬಂಧಿತರಲ್ಲಿ ಪ್ರಕರಣದ ಪ್ರಮುಖ ಆರೋಪಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅಭಿಷೇಕ್, ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ವಿರೇಶ್ ಕೂಡ ಸೇರಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಆರೇಳು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮೊದಲಿಗೆ ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ನಡೆಯುತ್ತಿದ್ದ ಕರಾಳದಂಧೆಯನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿ ಹಲವು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆನಂತರ ಪಾಂಡವಪುರದ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರ ಕ್ವಾಟ್ರಸ್ ನಲ್ಲಿ ಹಾಗೂ ನಾಗಮಂಗಲ ತಾಲೂಕು ಬೆಳ್ಳೂರಿನಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳು ಪತ್ತೆಯಾಗಿದ್ದವು.