ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ : ಆರ್.ಅಶೋಕ್

Update: 2024-08-07 15:12 GMT

ಮಂಡ್ಯ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಅಕ್ರಮ ನಿವೇಶನ ಹಗರಣದ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿ, ತನಿಖೆ ಎದುರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.

ಬುಧವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಡಾದಿಂದ ಪಡೆದಿರುವ 14 ನಿವೇಶನಗಳನ್ನು ಕೂಡಲೇ ವಾಪಸ್ ಬಿಟ್ಟುಕೊಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು.

ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ 14 ನಿವೇಶನ ಪಡೆದ ನಂತರ, ಅವರ ಬೆಂಬಲಿಗರು ಅಕ್ರಮವಾಗಿ 400ರಿಂದ 500 ನಿವೇಶನ ಕಬಳಿಸಿದ್ದಾರೆ. ಇದು ಪೂರ್ವಯೋಜಿತವಾಗಿದೆ. ಸಿಬಿಐ ತನಿಖೆಗೆ ಒಪ್ಪಿಸಿದರೆ ಸತ್ಯ ಬಯಲಾಗಲಿದೆ ಎಂದು ಅವರು ಹೇಳಿದರು.

ಮುಡಾ ಹಗರಣ ನಡೆದಿರುವುದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ಆದರೆ, ಬಿಜೆಪಿ ಅಧಿಕಾರದಲ್ಲಿ ಎಂದು ಸುಳ್ಳು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಿವೆ ಎಂದು ಅವರು ದಾಖಲೆಗಳ ಪ್ರತಿಯನ್ನು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಮುಡಾದಲ್ಲಿ ಕಾಂಗ್ರೆಸ್‍ನವರು ಮಾತ್ರವಲ್ಲ, ಯಾರೇ ಅವ್ಯವಹಾರ ನಡೆಸಿದ್ದರೂ ಶಿಕ್ಷೆಯಾಗಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರೇ ಆಗಲಿ ತಪ್ಪು ಮಾಡಿದ್ದರೆ ಉಪ್ಪು ತಿನ್ನುತ್ತಾರೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಪ್ಪಿಸಬೇಕು ಎಂದು ಹೇಳಿದರು.

ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಆದರೆ, ಅದರ ಬಗ್ಗೆ ನಮಗೆ ನಂಬಿಕೆ ಇಲ್ಲ. ಪೇಸಿಎಂ ಪ್ರಕರಣದಲ್ಲಿ ನಮ್ಮ ವಿರುದ್ಧ ರಚಿಸಿದ್ದ ನ್ಯಾಯಾಂಗ ಆಯೋಗ 12 ತಿಂಗಳಾದರೂ ವರದಿ ನೀಡಿಲ್ಲ. ಇದು ಕೂಡ ಹಾಗೆಯೇ ಆಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಬಿಜೆಪಿ ನಾಯಕರ ವಿರುದ್ಧ 21 ಹಗರಣಗಳಿವೆ ಎಂದು ಮೊದಲು ಹೇಳಿದರು. ವಿಪಕ್ಷದಲ್ಲಿದ್ದಾಗ ನೀವು ಈ ಬಗ್ಗೆ ಪ್ರಸ್ತಾಪ ಮಾಡಬೇಕಿತ್ತು. ಏಕೆ ಬಾಯಿಮುಚ್ಚಿಕೊಂಡಿದ್ದಿರಿ? ನಿಮ್ಮ ಬಾಯನ್ನು ಕಟ್ಟಿಹಾಕಿದ್ದವರು ಯಾರು? ಎಂದು ಅವರು ಪ್ರಶ್ನಿಸಿದರು.

ಯಾರು ಎಷ್ಟು ಅಕ್ರಮ ಆಸ್ತಿ ಮಾಡಿದ್ದಾರೆ ಎಂಬುದರ ಬಗ್ಗೆ ನಮ್ಮ ಹೋರಾಟವಲ್ಲ. ಮುಡಾದಿಂದ ಪಡೆದಿರುವ ನಿವೇಶನ ಹಿಂದಕ್ಕೆ ಒಪ್ಪಿಸಬೇಕು ಎಂಬುದಕ್ಕೆ ಹೋರಾಟ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು. ರಾಷ್ಟ್ರಪತಿವರೆಗೂ ಹೋಗುತ್ತೇವೆ ಎಂದು ಅಶೋಕ್ ಹೇಳಿದರು.

136 ಸ್ಥಾನಗಳಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಉರುಳಿಸುವ ದುರುದ್ದೇಶ ನಮಗೆ ಖಂಡಿತಾ ಇಲ್ಲ. ಅದನ್ನು ನಾವು ಮಾಡುವ ಅಗತ್ಯವೂ ಇಲ್ಲ. ಅವರ ಪಕ್ಷದವರಿಂದಲೇ ಅವರ ಸರಕಾರ ಪತವಾಗುತ್ತದೆ ಎಂದು ಅವರು ಭವಿಷ್ಯ ನುಡಿದರು.

ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಅಶ್ವಥ್ ನಾರಾಯಣ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಅರವಿಂದ ಬೆಲ್ಲದ್, ಮುಖಂಡರಾದ ಸಿ.ಟಿ.ಮಂಜುನಾಥ್, ರಮೇಶ್ ಗೌಡ, ಶ್ರೀಧರ್, ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News