ಮಂಡ್ಯದ ಅಸ್ಮಿತೆ, ಸಾಂಸ್ಕೃತಿಕ ಲೋಕದ ಹೊಸ ಭರವಸೆ ‘ಚಿತ್ರಕೂಟ’

Update: 2024-09-30 07:15 GMT

ಮಂಡ್ಯ, : ರೈತ, ದಲಿತ, ಪ್ರಗತಿಪರ ಚಳವಳಿ ಮತ್ತು ಸಾಂಸ್ಕೃತಿಕ, ವೈಚಾರಿಕ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಮಂಡ್ಯ ಜಿಲ್ಲೆ, ಈಗ ನಕಾರಾತ್ಮಕ ವಿಷಯಗಳಲ್ಲಿ ರಾಜ್ಯದ ಗಮನ ಸೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೆಣ್ಣುಭ್ರೂಣ ಹತ್ಯೆ, ಧ್ವಜಾರೋಹಣ ವಿವಾದ, ಗಣಪತಿ ಮೆರವಣಿಗೆಯಲ್ಲಿ ಸಂಘರ್ಷದಂತಹ ಘಟನೆಗಳು ಜಿಲ್ಲೆಗೆ ಕಪ್ಪುಚುಕ್ಕೆಯಾಗಿ ಪರಿಣಿಮಿಸಿವೆ. ರಾಜಕೀಯ ಲಾಭ ಈ ಬೆಳವಣಿಗೆಗಳಿಗೆ ಮೂಲ ಕಾರಣ. ಇಂತಹ ಕಾಲಘಟ್ಟದಲ್ಲಿ ಜಿಲ್ಲೆಯ ಜನರನ್ನು ಎಚ್ಚರಿಸಬೇಕಾದ ದಲಿತ, ರೈತ, ಪ್ರಗತಿಪರ ಸಂಘಟನೆಗಳು ಸ್ವಾರ್ಥಕ್ಕಾಗಿ ಛಿದ್ರ ಛಿದ್ರವಾಗಿಬಿಟ್ಟಿವೆ.

ಮಂಡ್ಯ ಅಸ್ಮಿತೆಯನ್ನು ಕಾಪಾಡುವಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ತೇಜಸ್ವಿ, ಲಂಕೇಶ್ ಅವರ ವಿಚಾರಗಳು. ಪ್ರೊ.ಎಚ್.ಎಲ್.ಕೇಶವಮೂರ್ತಿ, ಡಾ.ಬೆಸಗರಹಳ್ಳಿ ರಾಮಣ್ಣ, ಎಚ್.ಟಿ.ಕೃಷ್ಣಪ್ಪ, ಕೆ.ಎಸ್.ಪುಟ್ಟಣ್ಣಯ್ಯರಂತಹವರ ಪಾತ್ರ ಬಹುಮುಖ್ಯವಾಗಿತ್ತು. ಗೆಳೆಯರ ಬಳಗ, ಕರ್ನಾಟಕ ಸಂಘದಂತಹ ಸಾಂಸ್ಕೃತಿಕ ಸಂಸ್ಥೆಗಳು ಸದಾ ಚಳವಳಿ ಮತ್ತು ಜನರನ್ನು ಜಾಗೃತಗೊಳಿಸುತ್ತಿದ್ದವು. ಗೆಳೆಯರ ಬಳಗ ಇತಿಹಾಸದ ಪುಟ ಸೇರಿದ್ದರೆ, ಪ್ರೊ.ಬಿ.ಜಯಪ್ರಕಾಶಗೌಡರ ಪರಿಶ್ರಮ, ಸಾಮಾಜಿಕ ಕಳಕಳಿಯಿಂದ ಕರ್ನಾಟಕ ಸಂಘ ತನ್ನ ಜೀವಂತಿಕೆ ಉಳಿಸಿಕೊಂಡು ರಾಜ್ಯದ ಗಮನ ಸೆಳೆದಿರುವುದು ಸಮಾಧಾನದ ಸಂಗತಿ. ಇದೀಗ ಮಂಡ್ಯದ ಅಸ್ಮಿತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ‘ಚಿತ್ರಕೂಟ’ ಎಂಬ ಶೀರ್ಷಿಕೆಯ ಕಲೆ, ಸಾಹಿತ್ಯ, ಸಂಸ್ಕೃತಿ ಸಂಘಟನೆ ಆರಂಭದಲ್ಲೇ ಹೊಸ ಭರವಸೆಯನ್ನು ಮೂಡಿಸಿದೆ.

ಮಂಡ್ಯದ ನೆಲದಲ್ಲಿ ಸಂಸ್ಕೃತಿ ಪೋಷಿಸಲು, ವರ್ತಮಾನದಿಂದ ಭವಿಷ್ಯದ ಕಡೆಗೆ ಸಾಗಲು ಸಮಾನ ಮನಸ್ಸಿನ ಯುವ ಮನಸ್ಸುಗಳು ಹುಟ್ಟು ಹಾಕಿದ ಸಂಸ್ಥೆ ಚಿತ್ರಕೂಟ. ದಶಕಗಳ ಹಿಂದೆ ನಿತ್ಯಸಚಿವ ಕೆ.ವಿ.ಶಂಕರಗೌಡರ ಪುತ್ರ ಕೆ.ಎಸ್.ಸಚ್ಚಿದಾನಂದರು ಕಟ್ಟಿದ್ದ ಗೆಳೆಯರ ಬಳಗ ವಿಭಿನ್ನ ಕಾರ್ಯಕ್ರಮಗಳಿಂದ ಹೆಸರು ಮಾಡಿತ್ತು. ಪ್ರೊ.ಎಚ್.ಎಲ್. ಕೇಶವಮೂರ್ತಿ ಅವರು ಹೋರಾಟದ ಹಾದಿ ಹಿಡಿದು ಸಮರ್ಥವಾಗಿ ಮಂಡ್ಯದ ಸಾಕ್ಷಿಪ್ರಜ್ಷೆಯಾಗಿದ್ದರು. ಇದೀಗ ಹೊಸ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡ ಯುವಪಡೆ ಮುನ್ನಡೆಸುತ್ತಿರುವ ಚಿತ್ರಕೂಟ ಸಕ್ಕರೆ ನಾಡಿನಲ್ಲಿ ಹೊಸ ಕನಸುಗಳನ್ನು ಬಿತ್ತಲು ಹೊರಟಿದೆ.

ಮಂಡ್ಯ ಪರಿಸರದಲ್ಲಿ ಕುವೆಂಪು, ಲಂಕೇಶ್, ತೇಜಸ್ವಿ, ಎಚ್ಚೆಲ್ಕೆ, ಎಂಡಿಎನ್, ಕೆ.ವಿ.ಶಂಕರಗೌಡ, ಎಚ್.ಟಿ.ಕೃಷ್ಣಪ್ಪ, ಡಾ.ಬೆಸಗರಹಳ್ಳಿ ರಾಮಣ್ಣ ಹೀಗೆ, ಜಿಲ್ಲೆಯ ಬಗೆಗೆ ವಿಶೇಷ ಮಮಕಾರವಿಟ್ಟುಕೊಂಡಿದ್ದ ಮಹನೀಯರನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನದ ಭಾಗವಾಗಿ ಹುಟ್ಟಿಕೊಂಡ ಚಿತ್ರಕೂಟ ಕುವೆಂಪು ಅವರ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’’ ಎಂಬ ಹೊನ್ನುಡಿಯನ್ನು ಪ್ರಧಾನವಾಗಿ ಅಳವಡಿಸಿಕೊಂಡಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಆಶಯ ಸಾಕಾರ ಮತ್ತು ಮಂಡ್ಯಕ್ಕೆ ಕಳಂಕವಾಗಿರುವ ಮೂಢನಂಬಿಕೆ, ಹೆಣ್ಣು ಬ್ರೂಣಹತ್ಯೆ, ವರದಕ್ಷಿಣೆ ಪಿಡುಗಗಳನ್ನು ತೊಲಗಿಸುವ ಸದುದ್ಧೇಶ ಹೊಂದಿದೆ. ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಯ ಜತೆಗೆ ಯುವಜನರಲ್ಲಿ ವೈಚಾರಿಕತೆ ಹೆಚ್ಚಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದ ಗಮನ ಸೆಳೆಯುತ್ತಿದೆ.

ಚಿತ್ರಕೂಟ ಇತ್ತೀಚೆಗೆ ಮಂಡ್ಯದಲ್ಲಿ ಆಯೋಜಿಸಿದ್ದ ‘ತೇಜಸ್ವಿ-86’ ಕಾರ್ಯಕ್ರಮ ನೋಡಲು ಜನಜಂಗುಳಿಯೇ ನೆರೆದಿತ್ತು. ಸಭಾಂಗಣದ ಕುರ್ಚಿಗಳೆಲ್ಲ ತುಂಬಿ ನೂರಾರು ಜನ ಎರಡು ತಾಸು ನಿಂತುಕೊಂಡೇ ಕೃಷಿ, ತಂತ್ರಾಂಶ ಮತ್ತು ಪರಿಸರದ ಕತೆಗಳನ್ನು ಕೇಳಿಸಿಕೊಂಡರು. ಐಪಿಎಸ್, ಐಎಎಸ್ ಅಧಿಕಾರಿಗಳಂತಹ ಸಾಮಾಜಿಕ ಕಳಕಳಿಯ ಗಣ್ಯರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಸಾಧಕರ ಮಾತುಗಳನ್ನು ಕೇಳಿಸಿಕೊಂಡರು. ಡಾ.ಲೀಲಾ ಅಪ್ಪಾಜಿ ಅವರು ಸಂಗ್ರಹಿಸಿ ಪ್ರದರ್ಶಿಸಿದ ಪೂರ್ಣಚಂದ್ರ ತೇಜಸ್ವಿ ಅವರ ಬದುಕಿನ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯಿತು.

ಚಿತ್ರಕೂಟ ಈ ಹಿಂದೆ ಆಯೋಜಿಸಿದ್ದ ಲಂಕೇಶ್-90, ರಂಗಭೂಮಿ ಏನು-ಎತ್ತ?, ಗಣಿತ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮಗಳೂ ವಿಭಿನ್ನವಾಗಿ ಮಂಡ್ಯ ಜನರ ಮನಗೆದ್ದಿದ್ದವು. ಯುವ ತಂತ್ರಜ್ಞರು, ಸಾಫ್ಟ್ ವೇರ್ ಉದ್ಯೋಗಿಗಳು, ಮಾದರಿ ಕೃಷಿಕರು, ಲೇಖಕರು, ಕವಿಗಳು, ಶಿಕ್ಷಕರು ಚಿತ್ರಕೂಟ ಬಳಗದಲ್ಲಿದ್ದಾರೆ. ಹೆಸರು ಬಯಸದೇ ಕೆಲಸ ಮಾಡಬೇಕೆಂಬ ಈ ಯುವಬಳಗಕ್ಕೆ ಬಯಲುಸೀಮೆ ಕಟ್ಟೆಪುರಾಣ ಖ್ಯಾತಿಯ ಹಿರಿಯ ಅಂಕಣಕಾರ ಬಿ.ಚಂದ್ರೇಗೌಡ, ರಂಗಕರ್ಮಿ ಮಲ್ಲಿಕಾರ್ಜುನ ಮಹಾಮನೆ, ಡಾ.ಲೀಲಾ ಅಪ್ಪಾಜಿಯಂತಹ ಹಿರಿಯರ ಮಾರ್ಗದರ್ಶನವಿದೆ.

ಕಾರ್ಯಕ್ರಮಗಳನ್ನು ಸೃಜನಾತ್ಮಕವಾಗಿ ರೂಪಿಸುವ ಕೆಲಸವನ್ನು ಒಂದು ತಂಡವಾಗಿ ಇಲ್ಲಿ ಮಾಡಲಾಗುತ್ತಿದೆ. ಸಾಮಾಜಿಕ ಚಿಂತಕ ಭಗವಾನ್ ಚಕ್ರವರ್ತಿ, ಗ್ರಾಫಿಕ್ ತಂತ್ರಜ್ಞ ಅರವಿಂದ ಪ್ರಭು ಮುನ್ನಡೆಸುತ್ತಿರುವ ಚಿತ್ರಕೂಟ ತಂಡದಲ್ಲಿ ಚಿತ್ರಕಲಾವಿದ ಸೋಮವರದ, ಚಲನಚಿತ್ರ ನಿರ್ದೇಶಕ ವಿನಯ್‌ಕುಮಾರ್, ಸಿವಿಲ್ ಇಂಜಿನಿಯರ್ ಧನುಷ್‌ಗೌಡ, ಸಂಜು ಆಲಕೆರೆ ಮುಂತಾದವರು ವಿವಿಧ ವಿಭಾಗಗಳನ್ನು ಸೃಜನಾತ್ಮಕವಾಗಿ ಕಟ್ಟುತ್ತಿದ್ದಾರೆ. ಪರಿಸರ ಪ್ರೇಮಿಗಳು, ಮಾದರಿ ಕೃಷಿಕರು, ನವೋದ್ಯಮಿಗಳು, ಶಿಕ್ಷಕರು, ವಿಜ್ಞಾನಿಗಳು, ವೈದ್ಯರು ಮತ್ತು ಸಿವಿಲ್, ಸಾಫ್ಟ್ ವೇರ್ ಇಂಜಿನಿಯರ್‌ಗಳು ಚಿತ್ರಕೂಟ ಕಾರ್ಯಕಾರಿ ತಂಡದ ಭಾಗವಾಗಿದ್ದಾರೆ.

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸೃಜನಶೀಲ ಚಟುವಟಿಕೆಗಳು ಸ್ಥಗಿತತೆಯ, ಸನಾತನ ಸ್ವರೂಪ ಪಡೆಯುತ್ತಿರುವ ಈ ಹೊತ್ತಿನಲ್ಲಿ ಮಂಡ್ಯದ ‘ಚಿತ್ರಕೂಟ’ ವೇದಿಕೆ ಹೊಸ ಭರವಸೆ ಮೂಡಿಸಿದೆ. ಸಂಸ್ಕೃತಿ ಬಹುಸ್ವರೂಪಿ ಗುಣಲಕ್ಷಣಗಳನ್ನು ಹೊಂದಿದ್ದಾಗ ಮಾತ್ರ ಸೃಜನಶೀಲತೆಗೆ ಮುಕ್ತ ಅವಕಾಶಗಳಿರುತ್ತವೆ. ದಲಿತ-ಬಂಡಾಯ ಸಾಹಿತ್ಯ ಚಟುವಟಿಕೆಗಳ ನಂತರ ಕನ್ನಡ ಸಾಂ್ಕೃತಿಕ ಕ್ಷೇತ್ರ ಬಂಜರು ನೆಲದಂತೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ‘ಚಿತ್ರಕೂಟ’ ತಂಡವು ನೆಲ ಸಂಸ್ಕೃತಿಗಳ ಬೇರುಗಳನ್ನು ಅವಗಾಹಿಸಿಕೊಳ್ಳುವ ಮೂಲಕ ಸೃಜನಶೀಲತೆಗೆ ನಿರಂತರತೆ ತರಲಿ ಎಂದು ಆಶಿಸುವೆ.

-ಪ್ರೊ.ಹುಲ್ಕೆರೆ ಮಹದೇ, ಸಂಸ್ಕೃತಿ ಚಿಂತಕ

Writer - ವಾರ್ತಾಭಾರತಿ

contributor

Editor - Musaveer

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News