ಕಾವೇರಿ ವಿಷಯದಲ್ಲಿ ಮಂಡ್ಯಕ್ಕೆ ನ್ಯಾಯ ಒದಗಿಸುವುದು ಮೊದಲ ಆದ್ಯತೆ : ಕೇಂದ್ರ ಸಚಿವ ಎಚ್‌ಡಿಕೆ ಭರವಸೆ

Update: 2024-06-15 16:31 GMT

ಮಂಡ್ಯ: ಜಿಲ್ಲೆಗೆ ಕಾವೇರಿ ನೀರಿನ ವಿಷಯದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದು ನ್ಯಾಯ ಒದಗಿಸುವುದೇ ನನ್ನ ಆದ್ಯತೆಯಾಗಿದೆ ಎಂದು ಕೇಂದ್ರ ಬೃಹತ್ ಕೈಗಾಗಿಕೆ ಹಾಗು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತಾವು ಸಂಸದರಾಗಿ ಪ್ರತಿನಿಧಿಸಿರುವ ಮಂಡ್ಯಕ್ಕೆ ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಶನಿವಾರ ಆಗಮಿಸಿದ ವೇಳೆ ಮಂಡ್ಯ ಗಡಿಭಾಗ ನಿಡಘಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಮಾಡುವ ಮೂಲಕ ಮಂಡ್ಯದ ಋಣ ತೀರಿಸುತ್ತೇನೆ ಎಂದರು.

ಅತ್ಯಂತ ಬಹುಮತದಿಂದ ಗೆಲ್ಲಿಸಿದ್ದೀರಿ. ಅದರಲ್ಲೂ ವಿಶೇಷವಾಗಿ ಮದ್ದೂರು ವಿಧಾನಸಭಾ ಕ್ಷೇತ್ರದ ಜನತೆ 56 ಸಾವಿರಕ್ಕೂ ಹೆಚ್ಚು ಬಹುಮತಗಳನ್ನು ನೀಡಿರುವುದನ್ನು ನಾನು ಮರೆಯುವುದಿಲ್ಲ. ಮಂಡ್ಯ ಜಿಲ್ಲೆಗೂ ನನಗೂ ಹಾಗೂ ನನ್ನ ತಂದೆಯವರಾದ ದೇವೇಗೌಡರಿಗೂ ಅವಿನಾಭಾವ ಸಂಬಂಧ ಇದೆ. ಹಾಗಾಗಿ ನನಗೆ ಆಶೀರ್ವಾದ ಮಾಡಿದ್ದೀರಿ ಎಂದು ಅವರು ಹೇಳಿದರು.

ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಒತ್ತಡದಿಂದ ಮಂಡ್ಯದಲ್ಲಿ ಸ್ಪರ್ಧೆ ಮಾಡಿದೆ. ಅತ್ಯಂತ ಬಹುಮತದಿಂದ ಗೆಲ್ಲಿಸಿದಿರಿ. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿದ್ದಾರೆ. ನನಗೆ ಮಹತ್ವದ ಖಾತೆ ನೀಡಿದ್ದಾರೆ. ಮಂಡ್ಯ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರದ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಸುಮಾರು 50 ವರ್ಷದಿಂದ ಮಂಡ್ಯ ಜಿಲ್ಲೆ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತೇನೆ. ನನ್ನ ಬೆಳೆಸಿದ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಾರದಲ್ಲಿ ಒಂದು ದಿನ ಇಲ್ಲಿಗೆ ಬಂದು ಸಮಸ್ಯೆ ಆಲಿಸುತ್ತೇನೆ ಎಂದು ಅವರು ಹೇಳಿದರು.

ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ತನ್ನ ಕಚೇರಿಯನ್ನು ಉದ್ಘಾಟಿಸಿದರು. ಜಿಲ್ಲೆಯ ಗಡಿ ನಿಡಘಟ್ಟದಿಂದ ಮಂಡ್ಯದವರೆಗೂ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕುಮಾರಸ್ವಾಮಿ ಅವರನ್ನು ಮಂಡ್ಯದವರೆಗೂ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತಂದರು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಟಿ.ಮಂಜು, ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಕೆ.ಸುರೇಶ್‍ಗೌಡ, ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News