ಬುದ್ದ, ಬಸವ, ಅಂಬೇಡ್ಕರ್ ನನ್ನ ದಮಿನಿಯಲ್ಲಿ ಹರಿಯುತ್ತಿದ್ದಾರೆ : ಹಂಸಲೇಖ

Update: 2024-06-30 16:23 GMT

ಮಂಡ್ಯ : ಬುದ್ಧ, ಬಸವ, ಅಂಬೇಡ್ಕರ್ ಸದಾ ನನ್ನ ದಮನಿಗಳಲ್ಲಿ ಹರಿಯುತ್ತಿರುತ್ತಾರೆ. ಅವರನ್ನು ತಪಸ್ಸಿನ ರೀತಿ ಮನಸ್ಸಿನಲ್ಲಿ ಇಟ್ಟುಕೊಂಡು ಬದುಕುತ್ತಿದ್ದೇನೆ ಎಂದು ಖ್ಯಾತ ಸಂಗೀತ ನಿರ್ದೇಶಕ, ಗೀತರಚನಾಕಾರ ಡಾ.ಹಂಸಲೇಖ ಹೇಳಿದ್ದಾರೆ.

ಇಲ್ಲಿನ ಕರ್ನಾಟಕ ಸಂಘ ಸ್ಥಾಪಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ರವಿವಾರ ಸ್ವೀಕಾರ ಮಾಡಿ ಮಾತನಾಡಿದ ಅವರು, ನಾನು ಸಿನಿಮಾ ಪ್ರಪಂಚದಲ್ಲಿರುವುದರಿಂದ ನನ್ನ ಹೊರಗಿನ ಬದುಕು ರಂಜನೆಯಾಗಿದೆ. ಆದರೆ, ಒಳಗಿನ ಬುದುಕು ಚಿಂತನೆಯದಾಗಿದೆ ಎಂದರು.

ನಾನು ಸಿನಿಮಾರಂಗಕ್ಕೆ ಬಂದಾಗ ಕನ್ನಡ ಚಿತ್ರರಂಗದಲ್ಲಿ ಅನೇಕ ಲೋಪಗಳಿದ್ದವು. ನೃತ್ಯ ಸಂಯೋಜಕರು, ಸ್ಟಂಟ್ ಮಾಸ್ಟರ್ಸ್, ವಾದ್ಯಗಾರರು ಇರಲಿಲ್ಲ. ಎಲ್ಲದಕ್ಕೂ ತಮಿಳುನಾಡಿಗೆ ಹೋಗಬೇಕಿತ್ತು. ರವಿಚಂದ್ರನ್‍ನಂತಹ ಧೈರ್ಯಸ್ಥನನ್ನು ಹಿಡಿದುಕೊಂಡು ಇಂದು ಚಂದನವನವನ್ನು ಗಟ್ಟಿಗೊಳಿಸಿದ್ದೇವೆ ಎಂದು ಅವರು ಹೇಳಿದರು.

ಒಂದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡ ಪ್ರಶಸ್ತಿಯನ್ನು ಹಂಸಲೇಖ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಹಂಸಲೇಖ ಅವರು ಸಂಗೀತ ಕ್ಷೇತ್ರ ಮೀರಿ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಎತ್ತರಕ್ಕೆ ಬೆಳೆದಿದ್ದಾರೆ ಎಂದು ಶ್ಲಾಘಿಸಿದರು.

ಈ ದೇಶದಲ್ಲಿ ನೂರಾರು ರಾಜರು ಉತ್ತಮ ಆಡಳಿತ ಮಾಡಿದ್ದಾರೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಸರಿಸಮನಾದಂತಹ ಜನಪರವಾದ ರಾಜರು ಇತಿಹಾಸದಲ್ಲಿ ಬೇರೊಬ್ಬರಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ, ಶಾಸಕ ಪಿ.ರವಿಕುಮಾರ್, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಪ್ರೊ.ಎಸ್.ಬಿ.ಶಂಕರಗೌಡ, ಲತಾ ಹಂಸಲೇಖ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News