ಮಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಂದಾಳು ಬಿಕೆ ಕೃಷ್ಣಪ್ಪ ನಿಧನ
ಮಂಗಳೂರು, ಸೆ.17: ಸಿಪಿಐ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿಯ ಮಾಜಿ ಕಾರ್ಯದರ್ಶಿ ಬಿಕೆ ಕೃಷ್ಣಪ ಸೆ.17 ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಮತ್ತು ಅಪಾರ ಬಂಧು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಕೃಷ್ಣಪ್ಪ ಅವರು ಸಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಹಾಗೂ ರಾಜ್ಯ ಶಿಸ್ತು ಸಮಿತಿ ಸದಸ್ಯರಾಗಿಯೂ ದುಡಿದಿದ್ದಾರೆ. ಅವರು ಎಐಟಿಯುಸಿಯ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಕೌನ್ಸಿಲ್‌ನ ಸದಸ್ಯರಾಗಿಯೂ ಕೆಲಸ ಮಾಡಿ ಅಪಾರ ಕಾರ್ಮಿಕರ ಕಣ್ಮಣಿಯಾಗಿದ್ದರು.
ಹೆಂಚಿನ ಕಾರ್ಖಾನೆಯ ಉದ್ಯೋಗಿಯಾಗಿ ವೃತ್ತಿ ಬದುಕು ಪ್ರಾರಂಭಿಸಿದ ಕೃಷ್ಣಪ್ಪ ಅವರು ಅಂದು ಕಾರ್ಮಿಕ ವರ್ಗವನ್ನು ಸಂಘಟಿಸುತ್ತಿದ್ದ ಬಿವಿ ಕಕ್ಕಿಲ್ಲಾಯ, ಸಿಂಪ್ಸನ್ ಸೋನ್ಸ್, ಶಾಂತಾರಾಮ ಪೈ, ಲಿಂಗಪ್ಪ ಸುವರ್ಣ, ಮೋನಪ್ಪ ಶೆಟ್ಟಿ ಮುಂತಾದವರ ಒಡನಾಡಿಯಾಗಿ ಕಾರ್ಮಿಕ ವರ್ಗಕ್ಕಾಗಿ ದುಡಿದರು.
ಮಂಗಳೂರು ಮಹಾಪಾಲಿಕೆಯ ಪಂಜಿಮೊಗರು ಕ್ಷೇತ್ರದಿಂದ ಸಿಪಿಐ ಅಭ್ಯರ್ಥಯಾಗಿ ಮಹಾನಗರಪಾಲಿಕೆ ಸದಸ್ಯನಾಗಿ ಆಯ್ಕೆಯಾದ ಕೃಷ್ಣಪ್ಪನವರು ತಮ್ಮ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ್ದಾರೆ.
ಸಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ ಶೇಖರ, ಎಐಟಿಯುಸಿ ಜಿಲ್ಲಾ ಸಮಿತಿಯ ಸೀತಾರಾಮ ಬೇರಿಂಜ, ಮಂಗಳೂರಿನ ವೈದ್ಯ ಬಿ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಕೃಷ್ಣಪ್ಪ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.