ಕಾಂಗ್ರೆಸ್ ಸರಕಾರ ಬಂದ ಮೇಲೆ ಮುಸ್ಲಿಮರಿಗೆ ಮದ ಬಂದಿದೆ ಎಂದ ಸಿಟಿ ರವಿ

Update: 2023-07-14 16:31 GMT

-ಆರ್. ಜೀವಿ 

ಬಿಜೆಪಿ ನಾಯಕ ಸಿ ಟಿ ರವಿ ಒಂದು ಪಟ್ಟಿ ಮಾಡಿದ್ದಾರೆ. ಅವರ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಮುಸ್ಲಿಮರ ಒಂದು ವರ್ಗಕ್ಕೆ ಮದ ಏರಿದೆಯಂತೆ... ಅದು ಮದೋನ್ಮತ್ತವಾಗಿ ಯುದ್ಧೋನ್ಮಾದ ಸ್ಥಿತಿಯಲ್ಲಿದೆಯಂತೆ.. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗ್ತಾ ಇದೆಯಂತೆ...ಹಿಂದೂಗಳ ಕೊಲೆ ಮಾಡಲಾಗ್ತಾ ಇದೆಯಂತೆ... ಹೀಗೆ ಅಂತೆ ಕಂತೆಗಳ ಒಂದು ದೊಡ್ಡ ಪಟ್ಟಿಯನ್ನೇ ಸಿ ಟಿ ರವಿ ಮುಂದಿಟ್ಟಿದ್ದಾರೆ. 

ಆದರೆ ಸಿ ಟಿ ರವಿ ಪಟ್ಟಿ ಮಾಡೋದೇ ಆದ್ರೆ ಅದ್ರಲ್ಲಿ ಸೇರಿಸಲೇಬೇಕಾದ ಇನ್ನೂ ಹಲವು ಹಿಂದೂ ಸಂತ್ರಸ್ತರುಗಳ ಪಟ್ಟಿ ಇದೆಯಲ್ವಾ. ಅದನ್ನೆಲ್ಲಾ ಅವರು ಯಾಕೆ ಬಿಟ್ರು. ಪ್ರಾಣ ಕಳೆದುಕೊಂಡಿರುವ, ಸಂಕಷ್ಟಕ್ಕೆ ಈಡಾಗಿರುವ ಹಿಂದೂಗಳು, ಅದರಲ್ಲೂ ಬಿಜೆಪಿ ಕಾರ್ಯಕರ್ತರ ಬಗ್ಗೆಯೇ ಸಿ ಟಿ ರವಿ ಅವರಿಗೆ ಅದೇಗೆ ಇಷ್ಟೊಂದು ಮರೆವು, ನಿರ್ಲಕ್ಷ್ಯ. ಅಂತ ಆ ಸಂತ್ರಸ್ತರ ಮನೆಯವರೇ ಕೇಳ್ತಾ ಇದ್ದಾರೆ. 

ಅವರನ್ನು ಸಿ ಟಿ ರವಿ ಅವರು ಮರೆತೇ ಬಿಟ್ರಾ .. ಅಥವಾ ಮರೆತ ಹಾಗೆ ವರ್ತಿಸ್ತಾ ಇದ್ದಾರಾ ? ಗೊತ್ತಿಲ್ಲ. ಯಾವುದಕ್ಕೂ ಇರ್ಲಿ ಅಂತ ಅವರ ಗಮನಕ್ಕೆ ಇದೊಂದು ಪಟ್ಟಿಯನ್ನು ನಾವೂ ಮಾಡ್ತಾ ಇದ್ದೀವಿ. 

ಈ ಪಟ್ಟಿಯಲ್ಲಿ ಬರೋ ಮೊದಲ ಹಿಂದೂ ಸಂತ್ರಸ್ತ ಮಂಗಳೂರಿನ ವಿನಾಯಕ ಬಾಳಿಗಾ. ಅವರು ಬಿಜೆಪಿ ಕಾರ್ಯಕರ್ತರೇ ಆಗಿದ್ರು. ಆರ್ ಟಿ ಐ ಮೂಲಕ ಪ್ರಶ್ನೆ ಕೇಳ್ತಾ ಇದ್ದ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಯಿತು. ವಿಚಾರಣೆ ನಡೆದಾಗ ಬೆಳಕಿಗೆ ಬಂದ ಸಂಗತಿ ಏನಂದ್ರೆ ಕೊಲೆಯ ಪ್ರಮುಖ ಆರೋಪಿ ಯುವ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷ ಹಾಗು ಸಂಘ ಪರಿವಾರದ ಪ್ರಭಾವೀ ಮುಖಂಡ. ಆತನನ್ನು ಬಚಾವ್ ಮಾಡಲು ಸಾಕಷ್ಟು ಪ್ರಯತ್ನ ನಡೀತು. ಕೊನೆಗೂ ಆತನನ್ನು ಬಂಧಿಸಲಾಯಿತು. ಆತನಿಗೆ ಜಾಮೀನು ಸಿಕ್ಕಿ ಬಿಡುಗಡೆಯೂ ಆಯಿತು. ಆಗ ಅದೇ ಕೊಲೆ ಆರೋಪಿಯನ್ನು ಜೈಲಿನ ಬಾಗಿಲಿಗೆ ಹೋಗಿ ಅಪ್ಪಿ ಸ್ವಾಗತಿಸಿದ್ದು ಇದೇ ಬಿಜೆಪಿ ಭಾಷಣಕೋರ ನಮೋ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ. ವಿನಾಯಕ ಬಾಳಿಗಾ ಅವರ ಕೊಲೆಯಿಂದ ಜರ್ಜರಿತವಾಗಿದ್ದ ಅವರ ಕುಟುಂಬವನ್ನು ಇನ್ನಷ್ಟು ಕುಸಿಯುವಂತೆ ಮಾಡಿದ ಘಟನೆ ಅದು. ಇಂದಿಗೂ ವಿನಾಯಕ ಬಾಳಿಗಾ ಅವರ ಸೋದರಿಯರು ನ್ಯಾಯಕ್ಕಾಗಿ ಕಾಯ್ತಾ ಇದ್ದಾರೆ. ಯಾವತ್ತಾದರೂ ಸಿ ಟಿ ರವಿ ಅವರ ಮನೆಗೆ ಹೋಗಿದ್ದಾರಾ ? ಅವರಿಗೆ ಒಂದು ಸಾಂತ್ವನದ ಮಾತು ಹೇಳಿದ್ದಾರಾ ? ನಿಮ್ಮ ಸೋದರ ನನಗೂ ಸೋದರನ ಹಾಗೆ, ನಾನು ಆತನ ಕೊಲೆ ಮಾಡಿದವರಿಗೆ ಶಿಕ್ಷೆ ಸಿಗುವ ಹಾಗೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರಾ ?

ಇನ್ನು ಮೊನ್ನೆಯ ಮೈಸೂರಿನ ಟಿ ನರಸೀಪುರದಲ್ಲಿ ನಡೆದ ಕೊಲೆ ಪ್ರಕರಣ. ಅಲ್ಲಿ ನಡೆದ ವೇಣುಗೋಪಾಲ್ ನಾಯ್ಕನ ಕೊಲೆ ಪ್ರಕರಣದಲ್ಲಿ ಬಂಧಿತರು ಮಣಿಕಂಠ, ಸಂದೇಶ್, ಅನಿಲ್, ಶಂಕರ್, ಮಂಜು ಹಾಗೂ ಹ್ಯಾರಿಸ್. ಈ ಪೈಕಿ ಶಂಕರ್ ಎಂಬಾತ   ಬಿಜೆಪಿ ಕಾರ್ಪೊರೇಟರ್ ಒಬ್ಬರ ಸೋದರ. ಹಾಗಾದರೆ ಇದು ಯಾರಿಗೆ ಮದವೇರಿದ ಘಟನೆ ಎಂದು ಸಿ ಟಿ ರವಿ ಹೇಳ್ತಾರೆ ? ಇದರಲ್ಲಿ ಯಾರಿಗೆ ಯುದ್ಧೋನ್ಮಾದ ಏರಿದ ಹಾಗೆ ಸಿ ಟಿ ರವಿಗೆ ಕಾಣ್ತಾ ಇದೆ ? ಆ ಬಿಜೆಪಿ ಕಾರ್ಪೊರೇಟರ್ ಸೋದರ ಎದುರಿಸುತ್ತಿರೋ ಕೊಲೆ ಆರೋಪಕ್ಕೆ ಯಾರನ್ನು ಹೊಣೆ ಮಾಡ್ತಾರೆ ಸಿ ಟಿ ರವಿ ? 

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಇರುವಾಗಲೇ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ನೇರವಾಗಿ ಅಂದಿನ ಸಚಿವ ಕೆ ಎಸ್ ಈಶ್ವರಪ್ಪ ಅವರ ಮೇಲೆ ಆರೋಪ ಹೊರಿಸಿ ಪ್ರಾಣ ಬಿಟ್ಟಿದ್ದರು ಸಂತೋಷ್ ಪಾಟೀಲ್. " ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರೇ ಕಾರಣ ಎಂದು ವಾಟ್ಸಾಪ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಮಾಧ್ಯಮಗಳಿಗೂ ಕಳುಹಿಸಿದ್ದು,  ಸಚಿವರಿಗೆ  ಶಿಕ್ಷೆಯಾಗಬೇಕು, ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಪತ್ನಿ ಮಕ್ಕಳಿಗೆ ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಹಾಗೂ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಆಮೇಲೆ ಆಗಿದ್ದೇನು ? ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಈಶ್ವರಪ್ಪ ಅವರನ್ನು ಬಂಧಿಸಿದರೇ  ? ಇಲ್ಲ. 

ತೀವ್ರ ಆಕ್ರೋಶ ವ್ಯಕ್ತವಾದ ಮೇಲೆ ಅವರಿಂದ ರಾಜೀನಾಮೆ ಪಡೆಯಲಾಯಿತು. ಆಮೇಲೆ ಅವರಿಗೆ ಪೊಲೀಸರಿಂದ ಕ್ಲೀನ್ ಚಿಟ್ ಅನ್ನೂ ನೀಡಲಾಯಿತು. ಹಾಗಾದರೆ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಯಾರು ಕಾರಣ ? ಆತ ಜೀವ ಬಿಡುವಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವಷ್ಟು ಆತನಿಗೆ ಅನ್ಯಾಯ ಮಾಡಿದ್ದು ಯಾರ ಮದ ? ಯಾರ ಯುದ್ಧೋನ್ಮಾದ ಸಿ ಟಿ ರವಿಯವರೇ ? ಸಂತೋಷ್ ಪಾಟೀಲ್ ಮನೆಗೆ ಸಿ ಟಿ ರವಿ ಭೇಟಿ ನೀಡಿ ಏನಾದರೂ ಭರವಸೆ ನೀಡಿದ್ದಾರಾ ? ಆತನ ಪತ್ನಿ ಹಾಗು ಮನೆಯವರಿಗೆ ಸಾಂತ್ವನ ಹೇಳಿದ್ದಾರಾ ? ಇಷ್ಟೆಲ್ಲಾ ಆರೋಪ ಎದುರಿಸಿದ ಈಶ್ವರಪ್ಪ ಅವರಿಗೆ ಚುನಾವಣೆ ಸಂದರ್ಭ ಸ್ವತಃ ಪ್ರಧಾನಿ ಮೋದೀಜಿ ಅವರೇ ಕಾಲ್ ಮಾಡಿ ಮಾತಾಡಿ ಶುಭ ಹಾರೈಸಿದರು. ಆದರೆ ಅವರು ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಮನೆಯವರಿಗೆ ಏಕೆ ಕಾಲ್ ಮಾಡಿಲ್ಲ ಅಂತ ಸಿ ಟಿ ರವಿ ಪ್ರಶ್ನಿಸಿದರೆ ? ಯಾಕೆ ಪ್ರಶ್ನಿಸಿಲ್ಲ ? 

ಇದೇ ವರ್ಷ ಏಪ್ರಿಲ್ 18  ರಂದು  ಧಾರವಾಡ ಜಿಲ್ಲೆಯ ಕೋಟೂರು ಗ್ರಾಮದಲ್ಲಿ ಧಾರ್ಮಿಕ ಜಾತ್ರೆಯ ವೇಳೆ ಬಿಜೆಪಿ ಯುವಮೋರ್ಚಾ ನಾಯಕ ಪ್ರವೀಣ್ ಕಮ್ಮಾರ್ ಎಂಬಾತನ ಕೊಲೆ ನಡೆದಿತ್ತು. ಕೊಲೆ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಇದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹಿತ ಬಿಜೆಪಿ ನಾಯಕರು  ಆರೋಪಿಸಿದ್ದರು. ಆದರೆ  ಪೊಲೀಸ್ ತನಿಖೆಯಿಂದ ಪತ್ತೆಯಾಗಿದ್ದೇ ಬೇರೆ. ಪ್ರಕರಣದಲ್ಲಿ ರಾಘವೇಂದ್ರ ಪಟಾಟ್ ಎಂಬಾತನನ್ನು  ವಶಕ್ಕೆ ತೆಗೆದುಕೊಳ್ಳಲಾಯಿತು.  ಈ ರಾಘವೇಂದ್ರ ಬಿಜೆಪಿ ಸದಸ್ಯ.  ಆತ ಬಿಜೆಪಿ ಧಾರವಾಡ ಗ್ರಾಮೀಣದ ಒಬಿಸಿ ಉಪಾಧ್ಯಕ್ಷ ಕೂಡ ಆಗಿದ್ದ.  ಆರೋಪಿ ಬಿಜೆಪಿ ಸದಸ್ಯ ಎಂದು ಪ್ರವೀಣ್ ಸಹೋದರ ಕೂಡ ದೂರಿದ್ದರು.  ರಾಘವೇಂದ್ರ ಪಟಾಟ್ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಧಾರವಾಡದ ಅಂದಿನ ಬಿಜೆಪಿ ಶಾಸಕ ಅಮೃತ್ ದೇಸಾಯಿ ಅವರೊಂದಿಗೆ ಇರುವ ಫೋಟೋಗಳು ಕೂಡ ಹರಿದಾಡಿದ್ದವು. ಈ ಬಗ್ಗೆ ಎಂದೂ ಸಿ ಟಿ ರವಿ ಇದು ಬಿಜೆಪಿ ನಾಯಕರ ಮದ, ಇದು ಅವರ ಯುದೋನ್ಮಾದ ಎಂದು ಹೇಳಿದ್ದೂ ಎಲ್ಲೂ ವರದಿಯಾಗಿಲ್ಲ. 

ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುಮಾರು 70 ವರ್ಷದ ಆರೆಸ್ಸೆಸ್ ಮುಖಂಡ ನಾರಾಯಣ ರೈ ಎಂಬಾತ  ಅಪ್ರಾಪ್ತೆ ದಲಿತ  ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿತ್ತು. ಅತ್ಯಾಚಾರಕ್ಕೊಳಗಾದ ಆ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ  ನೀಡಿದ್ದಳು. ಆದರೂ ಇಡೀ ಪ್ರಕರಣ ಮುಚ್ಚಿ ಹಾಕಲು ಷಡ್ಯಂತ್ರ ರೂಪಿಸಲಾಗಿತ್ತು. ಕೊನೆಗೂ ದಲಿತ ಸಂಘಟನೆಗಳ ಪ್ರತಿಭಟನೆ ಬಳಿಕ ನಾರಾಯಣ ರೈಯನ್ನು ಬಂಧಿಸಲಾಗಿತ್ತು. ಸಿ ಟಿ ರವಿ ಎಂದಾದರೂ ಆ ಆರೆಸ್ಸೆಸ್ ಮುಖಂಡನಿಗೆ ಮದವೇರಿದ ಬಗ್ಗೆ ಮಾತಾಡಿದ್ದನ್ನು ನೀವು ನೋಡಿದ್ದೀರಾ ? 

2016 ರಲ್ಲಿ ಉಡುಪಿಯ ಬ್ರಹ್ಮಾವರ ಬಳಿ ದನ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯವರನ್ನು ಸಂಘ ಪರಿವಾರದ ಗೂಂಡಾಗಲೇ ಹೊಡೆದು ಕೊಂದೇ ಬಿಟ್ಟರು. ಬಿಜೆಪಿ ಕಾರ್ಯಕರ್ತನೇ ಆಗಿದ್ದ ಪ್ರವೀಣ್ ಪೂಜಾರಿ ಗೋ ರಕ್ಷಣೆಯ ಹೆಸರಲ್ಲಿ ನಡೆದ ಗೂಂಡಾಗಿರಿಗೆ ಬಲಿಯಾಗಿ ಹೋದ. ಆ ಬಗ್ಗೆ ಎಂದೂ ಸಿ ಟಿ ರವಿ ಮಾತಾಡಲೇ ಇಲ್ಲ. 

2015 ರಲ್ಲಿ ಬಂಟ್ವಾಳದಲ್ಲಿ ಹರೀಶ್ ಪೂಜಾರಿ ಎಂಬವರನ್ನು ಕೊಲೆ ಮಾಡಲಾಯಿತು. ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ಭುವಿತ್ ಶೆಟ್ಟಿ ಹಾಗು ಅಚ್ಯುತ್ ಪೂಜಾರಿಯವರನ್ನು ಬಂಧಿಸಲಾಯಿತು. ಹರೀಶ್ ಪೂಜಾರಿ ಮುಸ್ಲಿಂ ಎಂದು ತಪ್ಪಾಗಿ ಗ್ರಹಿಸಿ ಆರೋಪಿಗಳು ಅವರನ್ನು ಕೊಲೆ ಮಾಡಿದ್ದರು. ಬಿಜೆಪಿ, ಸಂಘ ಪರಿವಾರದ ಪರ ಸೋಷಿಯಲ್ ಮೀಡಿಯಾದಲ್ಲಿ  ಸಕ್ರಿಯವಾಗಿದ್ದ, ಪ್ರಗತಿಪರರಿಗೆ ಬೆದರಿಕೆ ಹಾಕುತ್ತಿದ್ದ ಭುವಿತ್ ಶೆಟ್ಟಿ ಕೊನೆಗೆ ಒಬ್ಬ ಹಿಂದೂವನ್ನೇ ಕೊಂದು ಹಾಕಿದ್ದ. ಸಿ ಟಿ ರವಿ ಎಂದೂ ಹರೀಶ್ ಪೂಜಾರಿ ಮನೆಗೆ ಭೇಟಿ ಕೊಟ್ಟಿಲ್ಲ. ಭುವಿತ್ ಶೆಟ್ಟಿಯ ಮದ ಏರಿರುವ ಬಗ್ಗೆ ಮಾತಾಡಿಲ್ಲ. 

ಇವೆಲ್ಲ ಪಟ್ಟಿ ಮಾಡಬಹುದಾದ ಇಂತಹ ಕೆಲವೇ ಕೆಲವು  ಪ್ರಕರಣಗಳು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬಿಜೆಪಿ ಸರಕಾರ ಇರುವಾಗಲೇ, ಬಿಜೆಪಿ ನಾಯಕರು ಹಾಗು ಕಾರ್ಯಕರ್ತರಿಂದಲೇ ಹಿಂದೂಗಳೇ ತೊಂದರೆಗೊಳಗಾದ ಪ್ರಕರಣಗಳ ಪಟ್ಟಿ ಮಾಡ್ತಾನೆ ಹೋಗಬಹುದು. ಅಷ್ಟು ದೀರ್ಘವಿದೆ ಇಂತಹ ಪ್ರಕರಣಗಳ ವಿವರ. 

ಇನ್ನು ಇಲ್ಲಿ ಬೊಮ್ಮಾಯಿಯವರ ಡಬಲ್ ಇಂಜಿನ್ ಸರಕಾರ ಇರುವಾಗ ಹಾಗು ಈಗಲೂ ಇಡೀ ಭಾರತದಲ್ಲಿ ಬೆಲೆ ಏರಿಕೆ, ನಿರುದ್ಯೋಗಗಳಿಂದ ತತ್ತರಿಸುತ್ತಿರುವವರಲ್ಲಿ ಬಹುತೇಕರೂ ಹಿಂದೂಗಳೇ. ಅದರಲ್ಲೂ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರೂ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಆದರೆ ಪಾಪ ಅವರು ಮೋದಿಜೀಗೆ ಎಲ್ಲಿ ಬೇಸರವಾಗುತ್ತೋ ಅಂತ ಸಹಿಸಿಕೊಂಡಿದ್ದಾರೆ. 

ಲಕ್ಷಾಂತರ ಬಿಜೆಪಿ ಯುವ ಕಾರ್ಯಕರ್ತರು ಹಾಗು ಕಟ್ಟಾ ಬೆಂಬಲಿಗರು ನಿರುದ್ಯೋಗದಿಂದಾಗಿ ಯಾವುದೇ ಕೆಲಸವಿಲ್ಲದೇ ವಾಟ್ಸ್ ಆಪ್ ಗಳಲ್ಲಿ ಬಿಜೆಪಿ ಐಟಿ ಸೆಲ್ ಹರಡುವ ಸುಳ್ಳು ಸುದ್ದಿಗಳನ್ನು ಫಾರ್ವರ್ಡ್ ಮಾಡಿಕೊಂಡು ಕಾಲ ಕಳೀತಾ ಇದ್ದಾರೆ. ಅಂತಹ ಯುವಕರೇ ಬೇಸತ್ತು ಈ ಬಾರಿ  ಚಿಕ್ಕಮಗಳೂರಲ್ಲಿ ಸಿ ಟಿ ರವಿಯವರನ್ನು ಸೋಲಿಸಿದ್ದಾರೆ. ಅವರ ಮದ, ಯುದ್ಧೋನ್ಮಾದಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಆದರೆ ಸಿ ಟಿ ರವಿಯವರ ಮಾತುಗಳನ್ನು ನೋಡಿದರೆ ಅವರಿನ್ನೂ ಇದರಿಂದ ಪಾಠ ಕಲಿತಂತೆ ಕಾಣುತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News