ದಿಲ್ಲಿಯಿಂದ ಬಂದು ಬಿಜೆಪಿ ಮುಖಕ್ಕೆ ಸತ್ಯ ಹಿಡಿದ ಬಿಜೆಪಿ ನಾಯಕಿ ಖುಷ್ಬೂ ಸುಂದರ್

Update: 2023-07-30 14:03 GMT

ಖುಷ್ಬೂ ಸುಂದರ್

ಉಡುಪಿ ಕಾಲೇಜಿನ ಪ್ರಕರಣದಲ್ಲಿ ಸುಳ್ಳು ಸುದ್ದಿ ಹರಡಿ ಉಡುಪಿಯ ಶಾಂತಿ ಭಂಗ ಮಾಡುವ ಬಿಜೆಪಿಯ ಹುನ್ನಾರ ಸಂಪೂರ್ಣ ವಿಫಲವಾಗಿದೆ.

ಸತ್ಯ ಅತ್ಯಂತ ಸ್ಪಷ್ಟವಾಗಿದ್ದರೂ ನೂರು ಹಸಿ ಸುಳ್ಳು ಹೇಳಿ ಸುಳ್ಳನ್ನೇ ಸತ್ಯ ಮಾಡಲು ಹೊರಟಿತ್ತು ಬಿಜೆಪಿ. ಅದಕ್ಕಾಗಿ ಅದರ ಸ್ಥಳೀಯ ಶಾಸಕರಿಂದ ಹಿಡಿದು ರಾಜ್ಯ, ರಾಷ್ಟ್ರೀಯ ನಾಯಕರೂ ಕೈಜೋಡಿಸಿ ಕೆಲಸ ಮಾಡಿದರು. ಆದರೆ ಕೊನೆಗೂ ಸತ್ಯವೇ ಗೆದ್ದಿದೆ. ಎಲ್ಲರೆದುರು ಸುಳ್ಳು ಬಯಲಾಗಿ ಸುಳ್ಳುಕೋರರು ಮುಖ ಮುಚ್ಚಿಕೊಳ್ಳುವಂತಾಗಿದೆ.

ಅಷ್ಟೇ ಅಲ್ಲ, ಬಿಜೆಪಿ ಹಾಗು ಸಂಘ ಪರಿವಾರದ ಹಸಿ ಸುಳ್ಳುಗಳನ್ನೇ ಸುದ್ದಿಯಂತೆ ಪ್ರಸಾರ ಮಾಡುತ್ತಿದ್ದ ಟಿವಿ ಚಾನಲ್ ಗಳು, ವೆಬ್ ಸೈಟ್ ಗಳ ಬಂಡವಾಳವೂ ಬಯಲಾಗಿದೆ.

ವಿಶೇಷ ಅಂದ್ರೆ ಎಲ್ಲರಿಗೂ ಗೊತ್ತಿದ್ದ ಈ ಸತ್ಯವನ್ನು ಮತ್ತೊಮ್ಮೆ ಬಿಜೆಪಿ ನಾಯಕರ ಮುಖಕ್ಕೆ ಹಿಡಿದಿದ್ದು ಬೇರಾರೂ ಅಲ್ಲ. ಅವರದೇ ಪಕ್ಷದ ನಾಯಕಿ, ರಾಷ್ಟ್ರೀಯ ವಕ್ತಾರೆ ಹಾಗು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್. ಉಡುಪಿಗೆ ಖುಷ್ಬೂ ಸುಂದರ್ ಬರ್ತಾರೆ ಎಂದು ಬಿಜೆಪಿ ನಾಯಕರು ಬಹಳ ಸಂಭ್ರಮದಿಂದ ಪ್ರೆಸ್ ಮೀಟ್ ಮಾಡಿ ಹೇಳಿದ್ದರು. ಅವರು ಬಂದು ನಮ್ಮ ಸುಳ್ಳಿನ ಅಭಿಯಾನಕ್ಕೆ ಸರಕಾರಿ ಮೊಹರು ಒತ್ತಿ ಹೋಗ್ತಾರೆ ಅಂತಾನೆ ಉಡುಪಿ ಬಿಜೆಪಿ ನಾಯಕರು ನಿರೀಕ್ಷಿಸಿ ಕೂತಿದ್ದರು.

ಆದರೆ ಸತ್ಯ ಎಲ್ಲರೆದುರು ಮತ್ತೆ ಮತ್ತೆ ಬರುತ್ತಿರುವಾಗ ಹಸಿ ಹಸಿ ಸುಳ್ಳು ಹೇಳೋದು ಅಷ್ಟು ಸುಲಭವಿಲ್ಲ. ಬುಧವಾರ ಸಂಜೆ ಉಡುಪಿಗೆ ತಲುಪಿದ ಖುಷ್ಬೂ ಸುಂದರ್ ಗುರುವಾರ ಇಡೀ ದಿನ ಪ್ರಕರಣದ ವಿಚಾರಣೆ ನಡೆಸಿದರು. ಆದರೆ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ಬಂದು ಉದ್ದಕ್ಕೂ ಆ ಆಯೋಗದ, ತಮ್ಮ ಸ್ಥಾನದ ಘನತೆಗೆ ತಕ್ಕಂತೆಯೇ ವರ್ತಿಸಿದ್ರು.

ಎಲ್ಲೂ ಬಿಜೆಪಿಯ ತೇಜಸ್ವಿ ಸೂರ್ಯ, ಯಶ್ ಪಾಲ್ ಸುವರ್ಣ ಅವರಂತೆ ಪ್ರೊಪಗಾಂಡಾ ನಾಯಕರ ಹಾಗೆ ವರ್ತಿಸಲಿಲ್ಲ. ಅಲ್ಲಿಗೆ ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇರಲೇ ಇಲ್ಲ. ಇದ್ದಿದ್ದು ಉಡುಪಿ ಬಿಜೆಪಿ ನಾಯಕರಿಗೆ ಹಿಡನ್ ರಾಜಕೀಯ ಅಜೆಂಡಾ ಮಾತ್ರ ಎಂದು ಜನರಿಗೆ ಮನದಟ್ಟಾಯಿತು. ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಬುಧವಾರ ಸಂಜೆ ವೇಳೆ ಉಡುಪಿಗೆ ಆಗಮಿಸಿದ್ದರು.

ಆಗ ಉಡುಪಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಕುರಿತು ವಿಚಾರಣೆಗೆ ಬಂದಿದ್ದೇನೆ. ನಾನು ಮೊದಲು ಈ ಸಂಬಂಧ ಪೊಲೀಸರನ್ನು ಭೇಟಿಯಾಗಿ ಎಫ್‌ಐಆರ್ ಸೇರಿದಂತೆ ಎಲ್ಲ ವಿಚಾರಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ. ಜು.27ರಂದು ಕಾಲೇಜಿಗೆ ಭೇಟಿ ಕೊಡುತ್ತೇನೆ, ಸಂತ್ರಸ್ತೆ ಮತ್ತು ಮೂವರು ವಿದ್ಯಾರ್ಥಿನಿಯರ ಜೊತೆ ಕೂಡ ಮಾತನಾಡುತ್ತೇನೆ. ಕಾಲೇಜಿನ ಆಡಳಿತ ಮಂಡಳಿ ಜೊತೆ ಕೂಡಾ ಮಾತನಾಡುತ್ತೇನೆ. ಎಲ್ಲರ ಜೊತೆ ಮಾತನಾಡಿದ ನಂತರ ನಾನು ಮಾಧ್ಯಮಗಳಿಗೆ ವಿವರಿಸುತ್ತೇನೆ. ಪ್ರಕರಣವನ್ನು ಸಂಪೂರ್ಣವಾಗಿ ನಾನು ಮೊದಲು ಆರಿತುಕೊಳ್ಳಬೇಕಾಗಿದೆ. ಒಟ್ಟು ಎರಡು ದಿನ ನಾನು ಇಲ್ಲಿ ಇರುತ್ತೇನೆ " ಎಂದು ಹೇಳಿದರು.

ಜುಲೈ 26 ಬುಧವಾರ ದಂದು ಪೊಲೀಸರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿದ ಅವರು,ಮ್ "ಈ ಪ್ರಕರಣ ಇಷ್ಟೊಂದು ವೈರಲ್ ಆಗಲು ಕಾರಣವೇನು ಎಂಬುದರ ಬಗ್ಗೆ ಗಮನ ಹರಿಸಬೇಕು. ಅನೇಕ ಸಂಗತಿಗಳ ಕುರಿತು ತನಿಖೆ ಆಗಬೇಕಾಗಿದೆ. ಪೂರಕ ಸಾಕ್ಷಿಗಳ ಸಂಗ್ರಹ ಮಾಡಬೇಕಾಗಿದೆ. ಇದುವರೆಗೂ ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ. ನಾಳೆ ನಾನು ಕಾಲೇಜಿಗೆ ಭೇಟಿ ನೀಡಿ, ಆಡಳಿತ ಮಂಡಳಿಯ ಜೊತೆ ಮಾತನಾಡಬೇಕಾಗಿದೆ. ಆ ಬಳಿಕವಷ್ಟೇ ಘಟನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಈ ಘಟನೆಯನ್ನು ಇಟ್ಟುಕೊಂಡು ಅನೇಕ ಫೇಕ್ ವಿಡಿಯೋಗಳು ಹರಿದಾಡುತ್ತಿವೆ. ಹರಿದಾಡುತ್ತಿರುವ ಈ ವಿಡಿಯೋಗಳು ಯಾವುದು ಕೂಡ ಸತ್ಯವಲ್ಲ. ಇದುವರೆಗೆ ಯಾವುದೇ ವಿಡಿಯೋ ಸಾಕ್ಷ್ಯ ಲಭ್ಯವಾಗಿಲ್ಲ. ವಿದ್ಯಾರ್ಥಿನಿಯರ ಮೊಬೈಲ್ ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೂರೂ ಮೊಬೈಲ್ ಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. 40 ಗಂಟೆಗಳ ಕಾಲ ರೆಟ್ರಿವ್ ಮಾಡಿದರೂ ಅದರಲ್ಲಿ ಏನು ಪತ್ತೆಯಾಗಿಲ್ಲ. ಮೂರು ಮೊಬೈಲ್‌ ಗಳ ಡಾಟಾ ಸಂಗ್ರಹ ಮಾಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಬೇಕಾಗಿದೆ. ಅಲ್ಲಿ ಸಾಕ್ಷ ಲಭ್ಯವಾದರೆ ವಿಡಿಯೋ ಬಗ್ಗೆ ಸ್ಷಷ್ಟತೆ ಸಿಗಬಹುದು. ಸೂಕ್ತ ಸಾಕ್ಷಿ ಸಿಗದೇ ಹೋದರೆ ಚಾರ್ಜ್ ಶೀಟ್ ಮಾಡಲು ಸಾಧ್ಯವಿಲ್ಲ. ಸಾಕ್ಷವಿಲ್ಲದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದ್ಯಕ್ಕೆ ಆ ವಿದ್ಯಾರ್ಥಿನಿಯರನ್ನು ನಾವು ಕೇವಲ ಆರೋಪಿಗಳು ಎಂದು ಕರೆಯಬಹುದು ಅಷ್ಟೇ. ಈ ಪ್ರಕರಣದಲ್ಲಿ ಭಾಗಿಯಾದ ಮೂರು ವಿದ್ಯಾರ್ಥಿನಿಯರ ಅಮಾನತು ಕೂಡಾ ಮಾಡಲಾಗಿದೆ . ಈ ಪ್ರಕರಣಕ್ಕೆ ಉಗ್ರರ ಲಿಂಕ್ ಇದೆ ಎಂದು ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿವೆ. ಘಟನೆಯ ಹಿಂದೆ ಬಿಗ್ಗರ್ ಥಿಯರಿ ಅಥವಾ ಬಿಗ್ಗರ್ ಸ್ಟೋರಿ ಇದೆ ಎಂದು ಸದ್ಯ ಯಾರೂ ಭಾವಿಸುವುದು ಬೇಡ. ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಅಗತ್ಯವಿಲ್ಲ. ಕೆಲವು ಜನರು ಇದಕ್ಕೆ ಕೋಮು ಬಣ್ಣ ಹಚ್ಚಲು ಹೊರಟಿದ್ದಾರೆ . ಆದರೆ ನಾವು ಯಾವುದೇ ಕೋಮು ದೃಷ್ಟಿಕೋನವನ್ನು ಇಟ್ಟು ಕೆಲಸ ಮಾಡಲ್ಲ . ನಾವು ಮಹಿಳೆಯರ ರಕ್ಷಣೆಗಾಗಿ ಇದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಮತ್ತು ಸಂತ್ರಸ್ತೆಗೆ ಮಾನಸಿಕ ಸ್ಥೈರ್ಯ ನೀಡಬೇಕಾಗಿದೆ. ಮತ್ತು ಆಕೆಗೆ ನಮ್ಮ ಬೆಂಬಲ ಬೇಕಾಗಿದೆ. ನಾವು ಯಾವುದೇ ಕೋಮು ಬಣ್ಣ ಇಲ್ಲದೆ ರಾಜಕೀಯ ಒತ್ತಡವಿಲ್ಲದೆ ಸಮಸ್ಯೆ ಬಗೆಹರಿಸಲು ಬಂದಿದ್ದೇವೆ. ನಾವು ಮಹಿಳೆಯರ ರಕ್ಷಣೆ ಮಾಡುತ್ತೇವೆ . ನಾವು ಯಾವುದೇ ಧರ್ಮ ಜಾತಿ ನೋಡಲ್ಲ . ಆದ್ದರಿಂದ ಜನರು ಇದಕ್ಕೆ ಕೋಮು ಬಣ್ಣ ಹಚ್ಚುವುದನ್ನು ನಿಲ್ಲಿಸಬೇಕು ಎಂದು ನಾವು ಬಯಸುತ್ತೇವೆ " ಎಂದು ಅತ್ಯಂತ ಜವಾಬ್ದಾರಿಯುತ, ಸ್ಪಷ್ಟ ಹೇಳಿಕೆ ಕೊಟ್ಟರು.

ಜೊತೆಗೆ " ಯಾವುದೇ ದೂರು ಬಾರದ ಕಾರಣ ಪೊಲೀಸರು ದೂರು ದಾಖಲಿಸಿಲ್ಲ. ಸಂತ್ರಸ್ತೆ ದೂರು ಕೊಟ್ಟಿಲ್ಲ. ತಾನು ದೂರು ನೀಡಲು ಬಯಸುವುದಿಲ್ಲ ಎಂದು ಸಂತ್ರಸ್ತೆ ಪತ್ರದ ಮೂಲಕ ಹೇಳಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಪತ್ರಿಕಾಗೋಷ್ಠಿಯ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಡಿಯೋ ಇತ್ತು ಮತ್ತು ಅದನ್ನು ನಾವು ಡಿಲೀಟ್ ಮಾಡಿದ್ದೇವೆ ಎಂದು ಅವರು ಹೇಳಿದ್ದರು. ವಿಡಿಯೋ ಡಿಲೀಟ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಸುಳಿವು ಇಲ್ಲದೆ ಪೊಲೀಸರು ಪ್ರಕರಣ ದಾಖಲಿಸುವುದು ಹೇಗೆ? ಹಿಂದೆ ನಿಂತು ಪೊಲೀಸರನ್ನು ದೂರುವುದು ಸುಲಭ. ಈಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರಿಗೆ ತನಿಖೆಗೆ ಸ್ವಾತಂತ್ರ್ಯ ನೀಡಬೇಕು" ಎಂದೂ ಹೇಳಿದ್ದರು ಖುಷ್ಬೂ ಸುಂದರ್ .

ಜು.27ರಂದು ಗುರುವಾರ ಕಾಲೇಜಿಗೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ ಖುಷ್ಬೂ ಸುಂದರ್, "ಘಟನೆ ಬಗ್ಗೆ ಸುದೀರ್ಘ ಸಮಯದ ಚರ್ಚೆ ನಡೆಸಿದ್ದೇವೆ. ಈಗಷ್ಟೇ ನಾವು ತನಿಖೆಯನ್ನು ಆರಂಭ ಮಾಡಿದ್ದೇವೆ. ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಅದಕ್ಕೆ ಇನ್ನಷ್ಟು ಸಮಯ ಬೇಕು , ಈಗಲೇ ಈ ವಿಚಾರದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬೇಡಿ. ಸಾಕ್ಷ್ಯ ಸಿಕ್ಕಿದೆಯಾ ಎಂಬ ಬಗ್ಗೆ ಹೇಳಲು ಸಾಧ್ಯವಿಲ್ಲ. ಪೊಲೀಸರ ಹೇಳಿಕೆಗಳನ್ನು ಹೊರತುಪಡಿಸಿ, ಜನರು ಬೇರೆ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಮಾಹಿತಿ ಸಂಗ್ರಹಕ್ಕೆ ನಮಗೆ ಇನ್ನು ಸ್ವಲ್ಪ ಸಮಯ ಬೇಕು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕೆಂದು ಪ್ರಾಮಾಣಿಕವಾಗಿ ವಿನಂತಿ ಮಾಡುತ್ತೇನೆ. ಯಾವುದೇ ಉಹಾಪೋಹಗಳಿಗೆ ವಾಟ್ಸಪ್ ಮೆಸೇಜ್ ಗಳಿಗೆ ಗಮನ ಕೊಡಬೇಡಿ. ಈಗಲೇ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬೇಡಿ. ನಾವೇ ಸರಿಯಾದ ಮಾಹಿತಿಯನ್ನು ನೀಡುತ್ತೇವೆ. ಆರೋಪಗಳು ಅನೇಕ ಇರಬಹುದು, ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. " ಎಂದರು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಖುಷ್ಬೂ ಸುಂದರ್ "ಸರ್ , ನಾನು ಇಲ್ಲಿ ನಿಮಗೆ ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಬಂದಿಲ್ಲ. ಇದು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಚಾರ. ಇದು ಮಹಿಳೆಯರಿಗೆ ಸಂಬಂಧಿಸಿದ ವಿಚಾರ. ಸ್ವಲ್ಪ ಕಾಯಬೇಕು. ಇದು ಎರಡು ನಿಮಿಷದ ನೂಡಲ್ಸ್ ಥರ ಅಲ್ಲ. ಟಾಯ್ಲೆಟ್ ನಲ್ಲಿ ಹಿಡನ್ ಕ್ಯಾಮೆರಾ ಇರಿಸಲಾಗಿದೆ ಎನ್ನುವ ವದಂತಿಯನ್ನು, ಆ ಬಗ್ಗೆ ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿ. " ಎಂದು ಹೇಳಿದರು ಖುಷ್ಬೂ ಸುಂದರ್.

ಮತ್ತೆ ಮತ್ತೆ ಇಲ್ಲದ ಹಿಡನ್ ಕ್ಯಾಮರಾ ಪತ್ತೆ ಮಾಡಲು ಉತ್ಸುಕರಾಗಿದ್ದ ಪತ್ರಕರ್ತರಲ್ಲಿ "ನೋಡಿ, ಇದೊಂದು ಶೈಕ್ಷಣಿಕ ಕೇಂದ್ರ. ಎಲ್ಲಿ ಹಿಡನ್ ಕ್ಯಾಮೆರಾ ಇರಲು ಸಾಧ್ಯವಿಲ್ಲ. ನೀವು ಮಾಧ್ಯಮಗಳು ನನ್ನಲ್ಲಿ ಇಂತಹ ಪ್ರಶ್ನೆ ಕೇಳುತ್ತಿರುವುದರಲ್ಲಿ ನನಗೆ ಬೇಸರವಿದೆ . ಇಂತಹ ಘಟನೆ ನಡೆದಿಲ್ಲ ಎಂದು ಹೇಳುವವರಲ್ಲಿ ನೀವು ಮೊದಲಿಗರಾಗಬೇಕಿತ್ತು. ನಾವೆಲ್ಲರೂ ಶೈಕ್ಷಣಿಕ ಕೇಂದ್ರಗಳಿಂದಲೇ ವಿದ್ಯಾವಂತರಾಗಿ ಬಂದಿದ್ದೇವೆ. ಅಲ್ಲಿ ಹಾಗೆಲ್ಲ ನಡೆಯಲ್ಲ ಎಂದು ನಮಗೆ ಗೊತ್ತಿದೆ. ನಿಮ್ಮಂತಹ ಯುವ ತರುಣಿಯರೂ ಅಂತಹದ್ದನ್ನು ಅನುಭವಿಸಿಲ್ಲ. ಹೀಗೆಲ್ಲ ಯೋಚಿಸುವ ಮುನ್ನ ಆಲೋಚಿಸಬೇಕು. ಸಂಬಂಧಪಟ್ಟ ಫೋನ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದಕ್ಕೆ ಹೊರತಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ನಮಗೆ ನಮ್ಮ ಕೆಲಸ ಮಾಡಲು ಬಿಡಿ. " ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಖುಷ್ಬೂ ಸುಂದರ್ .

ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್‌, ಆಡಳಿತ ಮಂಡಳಿಯ ಪ್ರಮುಖರು, ಸಂತ್ರಸ್ತೆ ಹಾಗೂ ಕಾಲೇಜಿನ ಹಲವು ವಿದ್ಯಾರ್ಥಿನಿಯರ ಜತೆ ಖುಷ್ಬೂ ಸುಂದರ್ ಸುದೀರ್ಘ ಚರ್ಚೆ ನಡೆಸಿದರು. ಘಟನೆ ನಡೆದಿದೆ ಎನ್ನಲಾದ ಕಾಲೇಜಿನ ಶೌಚಾಲಯಕ್ಕೆ ತೆರಳಿ ಪರಿಶೀಲಿಸಿದರು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೂ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಈ ಇಡೀ ಪ್ರಕ್ರಿಯೆಯಲ್ಲಿ ಸುಳ್ಯದ ಬಿಜೆಪಿ ಶಾಸಕಿ ಭಾಗೀರತಿ ಮುರುಳ್ಯ ಹಾಗು ನ್ಯಾಯವಾದಿ ಮೇರಿ ಶ್ರೇಷ್ಠ ಅವರು ಖುಷ್ಬೂ ಸುಂದರ್ ಅವರ ಜೊತೆಗಿದ್ದರು.

ಬಳಿಕ ಮಾತನಾಡಿದ ಖುಷ್ಬೂ ಸುಂದರ್ , " ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದ ತನಿಖೆ ಆರಂಭಿಸಿದ್ದು ಪೂರ್ಣಗೊಳ್ಳುವವರೆಗೂ ಮಾಧ್ಯಮಗಳು ಆಧಾರ ರಹಿತ ಸುದ್ದಿ ಪ್ರಕಟಿಸಬಾರದು. ವಿದ್ಯಾರ್ಥಿನಿಯರ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದ್ದು ವರದಿ ಬಂದ ನಂತರ ವಿಡಿಯೊ ಚಿತ್ರೀಕರಣವಾಗಿರುವ ಸತ್ಯಾಸತ್ಯತೆ ಬಯಲಾಗಲಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಬುಧವಾರ ರಾತ್ರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹಾಗೂ ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ಅವರೊಂದಿಗೆ ಚರ್ಚಿಸಿದ ಖುಷ್ಬೂ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ, ಉಡುಪಿಯ ಬಿಜೆಪಿ ನಾಯಕಿ ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು.

ಅಲ್ಲಿಗೆ ಬಿಜೆಪಿ ಸಂಪೂರ್ಣ ಕಂಗೆಟ್ಟು ಹೋಗಿದೆ. ಅರೇ .. ಇದೇನಾಗುತ್ತಿದೆ ಎಂದು ಅರ್ಥವಾಗದೆ ಅದು ನಿರಾಶೆಗೊಂಡಿದೆ.

ತಮ್ಮದೇ ಪಕ್ಷದ ರಾಷ್ಟ್ರೀಯ ವಕ್ತಾರೆ ಬಂದು ಇಲ್ಲಿ ತಮ್ಮದೇ ಪಕ್ಷದ ನಾಯಕಿಯರ ಜೊತೆಗೆ ಹೋಗಿ ಗಂಟೆಗಟ್ಟಲೆ ಪರಿಶೀಲನೆ ಮಾಡಿ, ವಿಚಾರಣೆ ನಡೆಸಿ ತಾವು ಈವರೆಗೆ ಹೇಳುತ್ತಾ ಬಂದಿರುವುದನ್ನೆಲ್ಲ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

ಇದು ಉಡುಪಿ ಹಾಗು ರಾಜ್ಯ ಬಿಜೆಪಿ ಪಾಲಿಗೆ ದೊಡ್ಡ ಸೋಲು. ಚುನಾವಣೆಯಲ್ಲಿ ಉದ್ದಕ್ಕೂ ಸುಳ್ಳು, ಕೋಮು ಪ್ರಚೋದನೆಗಳ ಮೂಲಕವೇ ಗೆಲ್ಲಲು ಪ್ರಯತ್ನಿಸಿ ಸೋತು ಸುಣ್ಣವಾಗಿರುವ ಬಿಜೆಪಿ ಈಗ ಮತ್ತೆ ಸುಳ್ಳಿನ ಆಸರೆಯಿಂದ ರಾಜಕೀಯ ಮಾಡಲು ಹೊರಟಿತ್ತು. ಆದರೆ ಅದು ಸಂಪೂರ್ಣ ವಿಫಲವಾಗಿದೆ.

ಖುಷ್ಬೂ ಸುಂದರ್ ರಾಜಕೀಯ ಅಮಲು ಏರಿಸಿಕೊಂಡು ಬಂದಿರಲಿಲ್ಲ. ಮುಕ್ತ ಮನಸ್ಸಿನಿಂದ ಬಂದು ಪ್ರತಿಯೊಂದು ಅಂಶವನ್ನೂ ಸ್ವತಃ ನೋಡಿ , ಕೇಳಿ ತಿಳಿದುಕೊಂಡು ಆಮೇಲೆ ಆ ಬಗ್ಗೆ ಮಾತಾಡಿದ್ದಾರೆ. ಹಾಗಾಗಿ ಯಶ್ಪಾಲ್ ಸುವರ್ಣ ಅಥವಾ ರಶ್ಮೀ ಸಾಮಂತ್ ರ ಹಾಗೆ ಹಸಿ ಹಸಿ ಸುಳ್ಳು ಹೇಳೋದು ಅವರಿಗೆ ಸಾಧ್ಯವಾಗಿಲ್ಲ. ಅವರು ಇದ್ದಿದ್ದನ್ನೇ ಇದ್ದ ಹಾಗೆ ಹೇಳಿದ್ದಾರೆ. ಕೊನೆಗೂ ಸತ್ಯವೇ ಗೆದ್ದಿದೆ.

ಈ ನಡುವೆ ಕಾಲೇಜಿನಲ್ಲಿ ನಡೆದ ವಿಡಿಯೊ ಎಂದು ನಕಲಿ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ ಒನ್ ಇಂಡಿಯಾ ಹಾಗು ಇನ್ನೊಂದು ಖಾಸಗಿ ಯೂಟ್ಯೂಬ್ ಚಾನೆಲ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಎಡಿಟೆಡ್ ಫೇಕ್ ವಿಡಿಯೊ ಅಪ್ ಲೋಡ್ ಮಾಡಿ ಅದನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಕಾಲುಸಿಂಗ್ ಚೌಹಾಣ್ ಎಂಬಾತನ ಮೇಲೆ ಕೋಮು ದ್ವೇಷ ಹರಡಿ ಸೌಹಾರ್ದತೆಗೆ ಧಕ್ಕೆ ಮಾಡುವ ಪ್ರಯತ್ನ ಎಂದು ಕೇಸು ದಾಖಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಉಡುಪಿ ಪ್ರಕರಣದ ಬಗ್ಗೆ ಮೊದಲು ಹಸಿ ಹಸಿ ಸುಳ್ಳು ಟ್ವೀಟ್ ಮಾಡಿ ಅದೇ ರೀತಿ ಇಂಗ್ಲೀಷ್ , ಹಿಂದಿ ಮಾಧ್ಯಮಗಳು ವರದಿ ಮಾಡಲು ಕಾರಣರಾದ ರಶ್ಮೀ ಸಾಮಂತ್ ವಿರುದ್ಧ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಉಡುಪಿ ನಿವಾಸಿ ಈ ರಶ್ಮೀ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರ ಸಲಹಾ ಸಮಿತಿ ಸದಸ್ಯೆಯಾಗಿದ್ದರು ಹಾಗು ಬಿಜೆಪಿ ಮುಖಂಡರು ಈಕೆಯ ಬೆಂಬಲಕ್ಕೆ ನಿಂತಿದ್ದರು. ಅದೇ ಕಾರಣಕ್ಕೆ ಉಡುಪಿ ಪೊಲೀಸರು ಈ ಸುಳ್ಳು ಕೋರ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ಉಡುಪಿಯ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಯಿಂದ ಸಮಾಜದ ಶಾಂತಿ ಕದಡುತ್ತದೆ, ಸೌಹಾರ್ದತೆ ಹಾಳಾಗುತ್ತದೆ, ಆರ್ಥಿಕತೆಗೆ ನಷ್ಟ ಆಗುತ್ತದೆ. ಸರಕಾರಕ್ಕೂ ರಾಜಕೀಯವಾಗಿ ಅದು ಸಮಸ್ಯೆ ಸೃಷ್ಟಿಸುತ್ತದೆ. ಆದರೆ ಹಾಲಿ ಕಾಂಗ್ರೆಸ್ ಸರಕಾರ ಈ ಸುಳ್ಳು ಸುದ್ದಿ ಫ್ಯಾಕ್ಟರಿಗಳ ವಿರುದ್ಧ ಕೇವಲ ಮಾತಿನ ಸಮರದಲ್ಲೇ ಕಾಲ ಕಳೆಯುತ್ತಿದೆ ಬಿಟ್ರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಲೇ ಇಲ್ಲ ಎಂಬುದು ಎಲ್ಲ ಪ್ರಜ್ಞಾವಂತರ ಅಳಲು. ಜನರಿಗಾಗಿ ಮಾತ್ರವಲ್ಲದೆ, ಸ್ವತಃ ತನ್ನ ರಾಜಕೀಯ ಲೆಕ್ಕಾಚಾರದಿಂದಲಾದರೂ ಕಾಂಗ್ರೆಸ್ ಸುಳ್ಲುಕೋರರು ಹಾಗು ಹಿಂಸೆ ಪ್ರಚೋದಿಸುವವರ ಕುರಿತ ತನ್ನ ಈ ಮೃದು ಧೋರಣೆ ಬಿಡಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಮನದರಿವು