ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ , ನೀರು ನವೆಂಬರ್ ತಿಂಗಳಿನಿಂದ ಪೂರೈಕೆ: ಮಧು ಬಂಗಾರಪ್ಪ

Update: 2024-02-06 10:11 GMT

ಮೈಸೂರು: ಸರಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರನ್ನು ಪೂರೈಲು ನಿರ್ಧರಿಸಲಾಗಿದ್ದು, ಮುಂಬರುವ ನವೆಂಬರ್ 1 ರಿಂದ ಇದು ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು," ಉಚಿತ ವಿದ್ಯುತ್ ನೀಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂಬುದು ನಮ್ಮ ಉದ್ದೇಶ. ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ನೀರು ಕೊಡಲು ನಿರ್ಧರಿಸಿದ್ದಾರೆ. ಬಹಳಷ್ಟು ಶಾಲೆಗಳು ವಿದ್ಯುತ್ ಬಿಲ್ ಕಟ್ಟಲು ಆಗದೆ ಕಂಪ್ಯೂಟರ್ ಶಿಕ್ಷಣ ಕೊಡಲು ಹಿಂಜರಿಯುತ್ತಿದ್ದರು. ಉಚಿತ ವಿದ್ಯುತ್ ನೀಡುವುದರಿಂದ ಮಕ್ಕಳಿಗೆ ಕಂಪ್ಯೂಟರ್ ತರಬೇತಿಯೂ ದೊರೆಯಲಿದೆ. ಇದರ ಜೊತೆಗೆ ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷರು ಸಂಜೆ ಸಮಯದಲ್ಲಿ ವಿದ್ಯುತ್ ಬಳಸಿಕೊಂಡು ಪಾಠ ಹೇಳಿಕೊಡಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ 300 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಈ ವರ್ಷದಲ್ಲಿ 500  ಪಬ್ಲಿಕ್ ಶಾಲೆಗಳನ್ನು ಪ್ರಾರಂಭ ಮಾಡಲು ಚಿಂತಿಸಲಾಗಿದೆ. ಪ್ರತಿ ಎರಡು ಗ್ರಾ.ಪಂ. ಗಳಲ್ಲಿ ಒಂದು ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಬೇಕು ಎಂದು ಚಿಂತಿಸಲಾಗಿದ್ದು, ನಮ್ಮ ಆಡಳಿತವಾಧಿಯಲ್ಲಿ ರಾಜ್ಯದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಮತ್ತೆ ಶಾಲೆಗಳಿಗೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳು ಹೆಚ್ಚು ಆರಂಭವಾದರೆ ಅವರಿಗೆ ಎಲ್.ಕೆ.ಜಿ, ಯುಕೆಜಿಯಿಂದಲೂ ಎಸೆಸೆಲ್ಸಿ ವರೆಗೆ ಗುಣಮಟ್ಟದ ಶಿಕ್ಷಣ ದೊರಕಲಿದೆ. ನಂತರ ಪಬ್ಲಿಕ್ ಶಾಲೆ ಪಕ್ಕದಲ್ಲೇ ಕಾಲೇಜುಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಒಟ್ಟಾರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಎಸೆಸೆಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶಕೊಟ್ಟು ಅವರು ತೇರ್ಗಡೆ ಹೊಂದುವಂತೆ ಮಾಡಲಾಗುವುದು. ಅವರ ಅಂಕಪಟ್ಟಿಯಲ್ಲಿ ಅನುತ್ತೀರ್ಣ ಎಂಬ ಅಂಶವನ್ನೇ ಸೇರಿಸಲಾಗುವುದಿಲ್ಲ ಎಂದು ತಿಳಿಸಿದರು.

ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಲಾಗುವುದು. ಈಗಾಗಲೇ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇನ್ನು 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಕನಿಷ್ಠ 10 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮತಿ ಸಿಗಬಹುದು ಎಂದರು.

ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. ಸದ್ಯ 40 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೆಲವು ಶಾಲೆಗಳಲ್ಲಿ ಕಡಿಮೆ ಮಕ್ಕಳಿದ್ದಾರೆ. ಅಂತಹ ಕಡೆಗಳಲ್ಲಿ ಆ ಮಕ್ಕಳುಗಳನ್ನು ಒಂದು ಕಡೆ ಸೇರಿಸಿ ಶಿಕ್ಷಣ ಕೊಡಲು ಸೂಚಿಸಿದ್ದೇನೆ. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಶಿಕ್ಷಣಕ್ಕೆ ಅನುದಾನ ನೀಡದ ಕೇಂದ್ರ ಸರಕಾರ:

ನಿಯಮದ ಪ್ರಕಾರ ಸರ್ವ ಶಿಕ್ಷಣ ಅಭಿಯಾನದ ಮೂಲಕ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಅನುದಾನ ಬರಬೇಕಿತ್ತು. ಆದರೆ ಆನುದಾನವನ್ನೇ ನೀಡದೆ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಶಿವಣ್ಣ, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News