ʼಗ್ಯಾರಂಟಿʼ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಒಂದು ನಯಾ ಪೈಸೆ ಬೇಕಿಲ್ಲ : ಸಿದ್ದರಾಮಯ್ಯ
ಮೈಸೂರು: ರಾಜ್ಯ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳಿಗೆ ಕೇಂದ್ರ ಸರಕಾರದಿಂದ ಒಂದು ನಯಾ ಪೈಸೆ ಬೇಕಿಲ್ಲ, ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಕರ್ನಾಟಕಕ್ಕೆ ಬಂದು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರಕಾರ ದುಡ್ಡು ಕೇಳುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದೇ ವೇದಿಕೆಗೆ ಬನ್ನಿ ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ ಯಾವು ಸತ್ಯ ಯಾವುದು ಸುಳ್ಳು ಎಂದು ರಾಜ್ಯದ ಜನರಿಗೆ ತಿಳಿಯಲಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಬಹಿರಂಗ ಸವಾಲು ಹಾಕಿದರು.
ನಗರದ ಬೂತಾಳೆ ಮೈದಾನದಲ್ಲಿ ಬುಧವಾರ ನಗರ ಕಾಂಗ್ರೆಸ್ ವತಿಯಿಂದ ಬಿಜೆಪಿ-ಜೆಡಿಎಸ್ ಮುಖಂಡರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು.
ಈ ವರ್ಷದ ಗ್ಯಾರಂಟಿ ಯೋಜನೆಗಳಿಗೆ 36 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಕೇಂದ್ರ ಸರಕಾರದಿಂದ ಒಂದು ಪೈಸೆ ಕೇಳಿಲ್ಲ. ಮುಂದಿನ ವರ್ಷದ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರೂ. ಬಜೆಟ್ ನಲ್ಲಿ ತೆಗೆದಿಟ್ಟಿದ್ದೇವೆ. ಇದಕ್ಕೂ ನಿಮ್ಮ ಒಂದು ರೂಪಾಯಿ ಬೇಡ. ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಸುಳ್ಳು ಹೇಳುವುದಕ್ಕೆ ರಾಜ್ಯದ ಬಿಜೆಪಿ ಮುಖಂಡರುಗಳು ತಮಟೆ ಹೊಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೃಷ್ಣ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಹಣ ಬಂದಿಲ್ಲ:
ಇದೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24 ನೇ ಸಾಲಿನ ಬಜೆಟ್ ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುವುದಾಗಿ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. 2024 ವರ್ಷ ಮುಗಿಯುತ್ತಾ ಬಂತು ಇದುವರೆಗೂ ಒಂದು ಪೈಸೆ ಸಹ ಬಂದಿಲ್ಲ. ಇದು ಸುಳ್ಳಾ ನಿಜಾನಾ ನಿರ್ಮಲಾ ಸೀತಾರಾಮನ್ ಅವರೇ ಎಂದು ಪ್ರಶ್ನಿಸಿದರು.
ನಿಯಮದ ಪ್ರಕಾರ NDRF ಹಣವನ್ನು ಒಂದು ತಿಂಗಳಲ್ಲಿ ಕೊಡಬೇಕು, ಆದರೆ ಇದುವರೆಗೂ ಕೊಟ್ಟಿಲ್ಲ:
ರಾಜ್ಯ ಬರಗಾಲದಿಂದ ತತ್ತರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. 240 ತಾಲ್ಲೂಕುಗಳ ಪೈಕಿ 234 ತಾಲ್ಲೂಕುಗಳು ಬರಪೀಡಿತ ಪ್ರದೇಶವಾಗಿದೆ. ಎನ್.ಡಿ.ಆರ್.ಎಫ್ ಅಡಿಯಲ್ಲಿ 18171 ಕೋಟಿ ರೂ. ಕೊಡಿ ಎಂದು ಕಳೆದ ಐದು ತಿಂಗಳ ಹಿಂದೆಯೇ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಸ್ವತಃ ನಾನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಈಗಾಗಲೇ ಮೂರು ಬಾರಿ ಮನವಿ ಮಾಡಿದ್ದೇವೆ. ನಿಯಮದ ಪ್ರಕಾರ ಎನ್.ಡಿ.ಆರ್.ಎಫ್ ಹಣವನ್ನು ಒಂದು ತಿಂಗಳಲ್ಲಿ ಕೊಡಬೇಕು ಆದರೂ ಇದೂ ವರೆಗೂ ಒಂದು ರೂಪಾಯಿಯನ್ನು ಕೊಟ್ಟಿಲ್ಲ. ನಿರ್ಮಲಾ ಸೀತಾರಾಮನ್ ಅವರೇ ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ ಸತ್ಯ ಹೇಳಿ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಕೇಂದ್ರ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ:
ಕೇಂದ್ರ ಸರಕಾರ ಕರ್ನಾಟಕದ 7 ಕೋಟಿ ಜನರನ್ನು ಅಲಕ್ಷ್ಯದಿಂದ ನೋಡುತ್ತಿದೆ. ಕರ್ನಾಟಕದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. 15 ನೇ ಹಣಕಾಸು ಆಯೋಗದಲ್ಲಿ ಆಯೋಗದ ಅಧ್ಯಕ್ಷರು ಕರ್ನಾಟಕಕ್ಕೆ ಅನ್ಯಾಯವಾಗಿದೆ ಅವರಿಗೆ 5495 ಕೋಟಿ ರೂ. ಕೊಡಬೇಕು ಎಂದು ಘೋಷಣೆ ಮಾಡಿದರು. ಆಧರೆ ಒಂದು ರೂಪಾಯಿ ಕೊಡಲಿಲ್ಲ, ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡುವುದಾಗಿ ಹೇಳಿದಿರಿ, ಬೆಂಗಳೂರು ಫೆರಿಫೆರಲ್ ರಸ್ತೆಗೆ 3 ಸಾವಿರ ಕೋಟಿ ಕೊಡುವುದಾಗಿ ಹೇಳಿದಿರಿ ಒಂದು ರೂಪಾಯಿ ಕೊಡಲಿಲ್ಲ, ಯಾಕೆ ಸುಳ್ಳು ಹೇಳುತ್ತಿದ್ದೀರಿ? ಇದರ ಬಗ್ಗೆ ಒಂದೇ ಒಂದು ಚಕಾರ ಎತ್ತದ ಬಿಜೆಪಿಯವರು ಕೇಂದ್ರ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇದು 7 ಕೋಟಿ ಕನ್ನಡಿಗರಿಗೆ ಮಾಡಿದ ದ್ರೋಹ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ-ಜೆಡಿಎಸ್ ಮುಖಂಡರು:
ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತೊರೆದು ಸಹಕಾರಿ ಧುರೀಣ ಎಚ್.ವಿ.ರಾಜೀವ್, ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಮಾಜಿ ನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್, ಮೈಮುಲ್ ಮಾಜಿ ಅಧ್ಯಕ್ಷ ಓಂಪ್ರಕಾಶ್ ಮುಖ್ಯಮಂತ್ತಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಕಾಂಗ್ರೆಸ್ ಸೇರ್ಪಡೆಗೊಂಡ ಮುಖಂಡರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದ ಬಾವುಟ ಕೊಟ್ಟು ಪಕ್ಷಕ್ಕೆ ಅಧಿಕೃತವಾಗಿ ಆಹ್ವಾನಿಸಿದರು.