ಸಂವಿಧಾನ ಬದಲಾದರೆ ಅರಾಜಕತೆ ಸೃಷ್ಟಿಯಾಗಿ ಕೋಮುವಾದ, ಸರ್ವಾಧಿಕಾರ ಕೇಕೆ ಹಾಕಲಿದೆ : ನ್ಯಾ.ನಾಗಮೋಹನ್ ದಾಸ್

Update: 2024-11-30 14:31 GMT

ಮೈಸೂರು : ಸಂವಿಧಾನ ಬದಲಾದರೆ ದೇಶದಲ್ಲಿ ಆರಾಜಕತೆ ಸೃಷ್ಟಿಯಾಗಿ ಕೋಮುವಾದ-ಸರ್ವಾಧಿಕಾರ ಕೇಕೆ ಹಾಕಲಿದೆ ಎಂದು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎಚ್.ಎನ್.ನಾಗಮೋಹನ್ ದಾಸ್ ಎಚ್ಚರಿಕೆ ನೀಡಿದ್ದಾರೆ.

ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ಶನಿವಾರ ಅಖಿಲ ಭಾರತ ಸಂಶೋಧಕರ ಸಂಘ, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗ, ಸಮಾನ ಮನಸ್ಕ ಜನಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಸಂವಿಧಾನ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧನ ಧಮ್ಮ ಮಾರ್ಗ, ಬಸವಣ್ಣ ಸವಾನತೆ ಮಾರ್ಗ, ಗಾಂಧೀಜಿಯ ಅಹಿಂಸಾ ಮಾರ್ಗ, ಡಾ.ಬಿ.ಆರ್.ಅಂಬೇಡ್ಕರ್ ಸಾವಾಜಿಕ ನ್ಯಾಯದ ಸಿದ್ಧಾಂತ ನಮ್ಮ ಸಂವಿಧಾನ ರೂಪುಗೊಂಡು ಪಾಳೇಗಾರಿಕೆ ಪದ್ಧತಿ, ರಾಜ ಆಡಳಿತವನ್ನು ಕೊನೆಗಾಣಿಸಿ ನಿಜವಾದ ಭಾರತವನ್ನು ನಿರ್ಮಾಣ ಮಾಡಿದೆ ಎಂದರು.

ಸಂವಿಧಾನದಿಂದ ಏನು ಬದಲಾವಣೆ ಆಗಿದೆ ಎಂದು ಕೆಲವರು ಕೇಳುತ್ತಾರೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ.30ರಷ್ಟು ಮಾತ್ರ ಶಿಕ್ಷಿತರಿದ್ದರು. ಈಗ ಶೇ.80ರಷ್ಟು ವಿದ್ಯಾವಂತರಿದ್ದಾರೆ. ಶೇ.70ರಷ್ಟು ಜನ ಬಡತನ ರೇಖೆಗಿಂತ ಕಡಿಮೆ ಇದ್ದರು. ಇಂದು ಶೇ.30ರಷ್ಟು ಜನ ಬಡತನ ರೇಖೆಗಿಂತ ಕಡಿಮೆ ಇದ್ದಾರೆ. ಗ್ರಾಮೀಣ ಪ್ರದೇಶಕ್ಕೆ ವಸತಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯವನ್ನು ಒದಗಿಸಿ ಜನ ಜೀವನವನ್ನು ಒಂದು ಮಟ್ಟಿಗಾದರೂ ಉತ್ತಮಗೊಳಿಸಿದೆ ಎಂದರು.

ಇವತ್ತಿಗೂ ಬಡತನ, ಹಸಿವು, ನಿರುದ್ಯೋಗ, ಅನಾರೋಗ್ಯಸ್ಥರು, ಅನಕ್ಷಸ್ಥರು, ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆ, ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಇದಕ್ಕೆ ಕಾರಣ ಸಂವಿಧಾನವೆಂದು ದೂರುವುದು ತಪ್ಪು. ಆಡಳಿತ ನಡೆಸುವವರು ಮತ್ತು ಸಂವಿಧಾನ ಆಶಯಗಳನ್ನು ಮೈಗೂಡಿಸಿಕೊಳ್ಳದ ನಮ್ಮಿಂದ ಈ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದರು.

ಭಾರತದ ಸಂವಿಧಾನ ಜಾತಿ ವ್ಯವಸ್ಥೆ ಹೊಗಿಲ್ಲ. ಆದರೆ, ಜಾತಿ ಅಸಮಾನತೆಗೆ ಪೆಟ್ಟು ಕೊಡಲಾಗಿದೆ. ಈ ದೇಶದ ರಾಷ್ಟ್ರಪತಿ ಬುಡಕಟ್ಟು ಸಮುದಾಯದ ಮಹಿಳೆ, ಅತಿ ಹಿಂದುಳಿದ ವರ್ಗದ ನರೇಂದ್ರ ಮೋದಿ ಪ್ರಧಾನಿಯಾಗಿರುವುದು ಸಂವಿಧಾನದಿಂದ. ಮಾಹಿತಿ, ತಂತ್ರಜ್ಞಾನ, ಸೈನೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಜಗತ್ತಿನ ಟಾಪ್ ಹತ್ತು ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದಾಗಿದೆ. ಇದಕ್ಕೆ ಸಂವಿಧಾನ ಕಾರಣ ಎಂದರು.

ಹೀಗಿದ್ದರು ಕೆಲವರು ಸಂವಿಧಾನವನ್ನು ಬದಲಾಯಿಸುವ ಮಾತಗಳನ್ನಾಡುತ್ತಾರೆ. ಅನೇಕ ಅನುಚ್ಛೇದಗಳನ್ನು ಅಪ ವ್ಯಾಖ್ಯಾನ ಮಾಡುತ್ತಾರೆ. ಸಂವಿಧಾನವನ್ನು ಕಳೆದುಕೊಂಡರೇ ಆರಾಜಕತೆ ಸೃಷ್ಟಿಯಾಗಿ, ಕೋಮುವಾದ-ಸರ್ವಾಧಿಕಾರ ಕೇಕೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.

ಸಂವಿಧಾನ ಬಂದು 70 ವರ್ಷಗಳು ಕಳೆದರು ಆಳ್ವಿಕೆ ನಡೆಸಿದವರು ಸಂವಿಧಾನವನ್ನು ಜನತೆಗೆ ತಲುಪಿಸುವ ಕೆಲಸ ಮಾಡಿಲ್ಲ. ಜನರಿಗೂ ಕೂಡ ಇದರ ಬಗ್ಗೆ ಆಸಕ್ತಿ ಇಲ್ಲ. ಭಾರತ ದೇಶವನ್ನು ತಿಳಿಯದೆ ಸಂವಿಧಾನ ಅರ್ಥವಾಗುವುದಿಲ್ಲ. ದೇಶದ ಇತಿಹಾಸ, ಜನರ ಮೂಲ, ಧರ್ಮಗಳು, ಜಾತಿಗಳು-ಉಪಜಾತಿಗಳು, ಆರ್ಥಿಕ ಸಂಬಂಧಗಳು, ಸಾವಾಜಿಕ ಸಂಬಂಧಗಳು, ಮೌಲ್ಯಗಳು, ಸಂಸ್ಕೃತಿ-ಉಪ ಸಂಸ್ಕೃತಿ ತಿಳಿಯಬೇಕು ಎಂದರು.

ಸಂವಿಧಾನದಿಂದ ಸಮಾಜವನ್ನು ತಿದ್ದಬಹುದು. ಸಂವಿಧಾನದ ಮೂಲ ತತ್ವಗಳನ್ನು ಅರಿತುಕೊಂಡರೆ ಸಮಾಜ ಕಟ್ಟುವ ದಾರಿ ಸುಲಭವಾಗಲಿದೆ. ಹೀಗಾಗಿ ಈ ದಾರಿಯಲ್ಲಿ ನಾವು ಸಾಗೋಣ. ಸಂವಿಧಾನವನ್ನು ಅರಿತವರು ಮಾತ್ರ ದೇಶದವನ್ನು ಉಳಿಸಲು ಸಾಧ್ಯ ಎಂದರು.

ಪ್ರಗತಿಪರ ಚಿಂತಕರಾದ ಸುಶೀಲ ಬಸವಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಪ್ರೊ.ಉಗ್ರನರಸಿಂಹೇಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ.ವೆಂಕಟರಾಮಯ್ಯ, ವಕೀಲ ಬಾಬು ರಾಜ್ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವೂ ದೇಶದಲ್ಲಿ ಸಮ ನಿರ್ವಾಣಕ್ಕೆ ವೇದಿಕೆ ಕಲ್ಪಿಸಿತ್ತು. ಆದರೆ, ಈಚೆಗೆ ಸಂವಿಧಾನವನ್ನು ವಿರೋಧಿಸುವ ಶಕ್ತಿಗಳು ಪ್ರಬಲವಾಗುತ್ತಿವೆ. ಸ್ವಾಮೀಜಿಯೊಬ್ಬರು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಶೋಚನೀಯ ಸಂಗತಿ. ಇದನ್ನು ನಾವು ಬಹಳ ಗಂಭೀರವಾಗಿ ಅಲೋಚನೆ ಮಾಡಬೇಕು. ಈ ಸಂಸ್ಕೃತಿ ಹತ್ತಿಕ್ಕಲು ಆಂದೋಲನ ಆರಂಭವಾಗಬೇಕು. ಇದರ ಭಾಗವಾಗಿಯೇ ಸಂವಿಧಾನ ಓದು ಆಂದೋಲನ ರೂಪದಲ್ಲಿ ನಡೆಯುತ್ತಿದೆ.

- ಪ್ರೊ.ಕೆ.ವೆಂಟಕರಾಮಯ್ಯ,

ಪೇಜಾವರ ಸ್ವಾಮೀಜಿ ಅವರು ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ ಎಂದಿದ್ದಾರೆ. ಯಾಕೇ ಸ್ವಾಮೀಜಿ ನಿಮ್ಮನ್ನು ಗೌರವಿಸುವ ಸಂವಿಧಾನವಿದ್ದರೆ ಸಾಕೇ, ಎಲ್ಲರನ್ನು ಗೌರವಿಸುವ ಸಂವಿಧಾನ ನಿಮಗೆ ಬೇಡವೆ?

- ಸುಶೀಲ ಬಸವಲಿಂಗಯ್ಯ,

ಪ್ರಗತಿಪರ ಚಿಂತಕಿ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News