ಹಾಸನದ ಸ್ವಾಭಿಮಾನಿ ಸಮಾವೇಶ ಯಾರಿಗೋಸ್ಕರ?: ವಿಶ್ವನಾಥ್ ವಾಗ್ದಾಳಿ

Update: 2024-12-01 10:36 GMT

ಮೈಸೂರು, ಡಿ.1: ಹಾಸನದಲ್ಲಿ ಡಿ.5ರಂದು ನಡೆಸುತ್ತಿರುವ ಅಹಿಂದ ಸ್ವಾಭಿಮಾನಿ ಸಮಾವೇಶ ಯಾರಿಗೋಸ್ಕರ? ಡಿ.ಕೆ.ಶಿವಕುಮಾರ್ ರನ್ನು ಎದುರಿಸುವುದಕ್ಕೋ ಅಥವಾ ಕಾಂಗ್ರೆಸ್ ಹೈಕಮಾಂಡ್ ಅನ್ನು ಬೆದರಿಸುವ ಉದ್ದೇಶದಿಂದಲೋ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾಭಿಮಾನಿ ಸಮಾವೇಶ ಯಾರಿಗೋಸ್ಕರ? ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಿದ್ಧರಾಮಯ್ಯರಿಗೆ ಸಂಕಟ ಬಂದಾಗ ಮಾತ್ರ ಅಹಿಂದ ನೆನಪಾಗುತ್ತದೆಯೇ? ಅಹಿಂದ ವರ್ಗಕ್ಕೆ ಏನು ಮಾಡಿದ್ದೀರಿ ಎಂಬುದನ್ನು ತಿಳಿಸಿ ಎಂದು ಒತ್ತಾಯಿಸಿದರು.

ಒಪ್ಪಂದದಂತೆ 30 ತಿಂಗಳ ನಂತರ ಡಿ.ಕೆ.ಶಿವಕುಮಾರ್ ಗೆ ಅಧಿಕಾರ ಬಿಟ್ಟು ಕೊಡಬೇಕು. ಹಾಗಾಗಿ ಡಿ.ಕೆ.ಶಿವಕುಮಾರ್ ಮತ್ತು ಹೈಕಮಾಂಡ್ ಎದುರಿಸಲು ಈ ಸಮಾವೇಶ ಮಾಡುತ್ತಿದ್ದೀರಾ ಎಂದು ವಿಶ್ವನಾಥ್ ಪ್ರಶ್ನಿಸಿದರು.

ಎಸ್ಟಿ ಸಮುದಾಯದ 80 ಕೋಟಿ ರೂ. ನುಂಗಿದೆವು, ಭೋವಿ ನಿಗಮದ 90 ಕೋಟಿ ರೂ. ತಿಂದೆವು ಎಂದು ಹೇಳುತ್ತೀರಾ? ಸರಕಾರ ಇರುವುದು ಬರೀ ಅಹಿಂದ ವರ್ಗವನ್ನು ರಕ್ಷಣೆ ಮಾಡುವುದಕ್ಕೋಸ್ಕರವೇ? ಎಲ್ಲಾ ವರ್ಗದವರು ಸೇರಿ 136 ಸೀಟು ಕಾಂಗ್ರೆಸ್ ಗೆ ಬಂದಿದೆ. ಬರೀ ಅಹಿಂದ ವರ್ಗದವರು ಮಾತ್ರ ಇರುವುದೇ?, ಬೇರೆಯವರು ಇಲ್ಲವೇ ಎಂದು ಪ್ರಶ್ನಿಸಿದರು.

ಸ್ವಾಭಿಮಾನಿ ಸಮಾವೇಶದ ಹೆಸರಿನಲ್ಲಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ. ನಿಮ್ಮ ತಪ್ಪುಗಳನ್ನೆಲ್ಲಾ ಮುಚ್ವಿಕೊಳ್ಳಲು ಸತ್ಯವಂತ ಮಂತ್ರಿಗಳಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಅವರನ್ನು ಜೊತೆಯಲ್ಲಿಟ್ಟುಕೊಂಡಿದ್ದೀರಿ. ನೀವೆಲ್ಲಾ ಹೇಳೋದು ಒಂದೇ ಮುಡಾ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಅಕ್ರಮದ ಬಗ್ಗೆ ದೂರು ದಾಖಲಿಸಬೇಕು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 140 ಸೈಟ್ ಗಳ ಫೈಲ್ ಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ. ಇದರ ಬಗ್ಗೆ ಮೊದಲು ಮುಡಾ ಅಧ್ಯಕ್ಷರು ದೂರು ದಾಖಲಿಸಬೇಕು ಎಂದು ಎಚ್.ವಿಶ್ವನಾಥ್ ಒತ್ತಾಯಿಸಿದರು.

ಚಂದ್ರಶೇಖರ ಸ್ವಾಮೀಜಿ ಮೇಲಿನ ಎಫ್.ಐ.ಆರ್. ಖಂಡನೆ

ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಮೇಲೆ ಎಫ್.ಐ.ಆರ್ ದಾಖಲಿಸಿರುವುದು ಖಂಡನೀಯ ಎಂದು ಎಚ್.ವಿಶ್ವನಾಥ್ ಹೇಳಿದರು.

ಸ್ವಾಮೀಜಿ ಅವರು ಬಾಯಿ ತಪ್ಪಿನಿಂದ ಹೇಳಿದ್ದೇನೆ ಎಂದು ಪತ್ರ ಬರೆದಿದ್ದರೂ ಅವರ ಹಿರಿತನಕ್ಕೆ ಗೌರವ ಕೊಡುವುದನ್ನು ಬಿಟ್ಟು ಅವರ ಮೇಲೆ ಎಫ್.ಐ.ಆರ್. ದಾಖಲು ಮಾಡಿರುವುದು ಸರಿಯಲ್ಲ. ಗೃಹ ಸಚಿವರು ಸ್ವಾಮೀಜಿ ವಿಚಾರದಲ್ಲಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಸ್ವಾಮೀಜಿ ಅವರಿಗೆ ವಯಸ್ಸಾಗಿದೆ. ಅವರು ಗೊತ್ತಿಲ್ಲದೆ ಹೇಳಿಕೆ ನೀಡಿದ್ದಾರೆ. ಅವರು ಪತ್ರ ಬರೆದ ಮೇಲೂ ಎಫ್.ಐ.ಆರ್ ದಾಖಲು ಮಾಡಿರುವುದು ಸರಿಯಲ್ಲ. ಸರಕಾರ ಕೂಡಲೇ ಎಫ್.ಐ.ಆರ್. ಹಿಂದೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನೈತಿಕತೆ ಇಲ್ಲದ ಬಿಜೆಪಿ ನಾಯಕರು

ಬಿಜೆಪಿ ಆಂತರಿಕ ಕಲಹವನ್ನು ಜನ ಮೆಚ್ಚುವುದಿಲ್ಲ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಬಿಜೆಪಿ ನಾಯಕರಿಗೆ ವೈಚಾರಿಕತೆಯೂ ಇಲ್ಲ, ನೈತಿಕತೆತೂ ಇಲ್ಲ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳು ನೈತಿಕತೆ, ವೈಚಾರಿತೆಗಳನ್ನು ಕಳೆದುಕೊಂಡಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News