ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನ ಪಡುತ್ತೇನೆ : ಎಚ್‌.ಡಿ.ಕುಮಾರಸ್ವಾಮಿ ಭರವಸೆ

Update: 2024-07-28 10:05 GMT

ಮೈಸೂರು : ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂಬುದು ಎಲ್ಲರ ಬಯಕೆ. ಇದರ ಅನುಷ್ಠಾನಕ್ಕೆ ನಾನು ಪ್ರಯತ್ನ ಪಡುತ್ತೇನೆ. ಇದರ ಬಗ್ಗೆ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡುವುದನ್ನು ಬಿಟ್ಟು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭೇಟಿ ಮಾಡಿ, ಈ ಯೋಜನೆಗೆ ಅಡ್ಡಿಪಡಿಸದಂತೆ ಮನವೊಲಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾನು ಗೆದ್ದು ಒಂದು ತಿಂಗಳು ಆಗಿದೆ. ಒಂದೇ ರಾತ್ರಿಯಲ್ಲಿ ಮೇಕೆದಾಟು ಮಾಡಲು ಆಗುತ್ತಾ?. ಕರ್ನಾಟಕದ ನಾಲ್ಕು ಜಲಾಶಯ ಕಟ್ಟಲು ಕೇಂದ್ರದಿಂದ ಒಂದು ರೂಪಾಯಿ ಕೊಟ್ಟಿಲ್ಲ. ಕರ್ನಾಟಕದ ಜಲಾಶಯವನ್ನು ಇಲ್ಲಿನ ಜನರ ತೆರಿಗೆ ಹಣದಿಂದಲೇ ಕಟ್ಟಿರುವುದು. ಸರ್ವ ಪಕ್ಷ ಸಭೆ ಕರೆಯುವುದನ್ನು ಬಿಟ್ಟು ನೀವು ಹೋಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಚರ್ಚೆ ಮಾಡಿ. ನೀವು ಯಾವತ್ತಾದರೂ ಹೋಗಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ತಮಿಳುನಾಡಿಗೆ ನೀರು ಬಿಡಕಾಗಿರುವುದಕ್ಕಿಂತ ಹೆಚ್ಚಿನ ನೀರನ್ನು ನಾವು ಬಿಡುತ್ತಿದ್ದೇವೆ. ಮಳೆ ಬಂದಾಗ ಹೆಚ್ಚಿನ ನೀರು ಸಂಗ್ರಹಿಸಿಟ್ಟುಕೊಳ್ಳಲು ತಾಂತ್ರಿಕವಾಗಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ, "ನಾನು ಈ ಹಿಂದೆ ಸಿಎಂ ಆಗಿ, ಇದೀಗ ಕೇಂದ್ರ ಸಚಿವನಾಗಿ ಸ್ವಲ್ಪ ಅನುಭವ ಪಡೆದಿದ್ದೇನೆ. ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೀಕರ ಪ್ರವಾಹ ಬಂತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತು‌. ಸ್ವತಃ ಪ್ರಧಾನಿಯವರೇ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದರು. ಅಂತಹ ವಾತಾವರಣವನ್ನು ನೀವೇಕೆ ಸೃಷ್ಟಿಸಿಕೊಂಡಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಏಕೆ ದೂರುತ್ತೀರಿ.? ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ? ಎಂದು ಪ್ರಶ್ನಿಸಿದರು.

 ಎಲ್ಲದಕ್ಕೂ ಕೇಂದ್ರದ ವಿರುದ್ಧ ಆರೋಪ ಸರಿಯಲ್ಲ : ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕೇಂದ್ರದ ಮುಂದೆ ಸಮರ್ಥವಾಗಿ ಇಡಬೇಕು. ಅದು ಬಿಟ್ಟು ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ.  ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿಲ್ಲ.ರಾಜ್ಯವೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣವನ್ನೂ ಮೀಸಲಿಡಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತದೆ. ಆದರೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡದೇ ಕೇಂದ್ರದ ವಿರುದ್ಧ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದರು.

ಮುಡಾ ಹಗರಣದಿಂದ ಪಾರಾಗಲು ದೇಸಾಯಿ ಆಯೋಗ ರಚನೆ:

ಮುಡಾ ಹಗರಣದಿಂದ ಪಾರಾಗಲು ಸಿಎಂ ಸಿದ್ದರಾಮಯ್ಯ ದೇಸಾಯಿ ಆಯೋಗ ರಚನೆ ಮಾಡಿದ್ದಾರೆ. ಈ ಸರ್ಕಾರ ಹಾಗೂ ಸಿದ್ದರಾಮಯ್ಯ ಒಂದು ಕ್ಷಣವೂ ಮುಂದುವರಿಯಬಾರದು ಎಂಬುದು ನನ್ನ ಆಶಯ. ಸಿದ್ದರಾಮಯ್ಯ ಪತ್ನಿ 50 ಅಲ್ಲ 100 ನಿವೇಶನ ಬೇಕಾದರೂ ಪಡೆದುಕೊಳ್ಳಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಕಾನೂನುಬದ್ದವಾಗಿ ಪಡೆದುಕೊಳ್ಳಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.

ನಾನು ಮುಡಾದಿಂದ ಯಾವುದೇ ನಿವೇಶನ ಪಡೆದಿಲ್ಲ:

1984ರಲ್ಲಿ ನಿವೇಶನ ಕೋರಿ ಮುಡಾಗೆ ಅರ್ಜಿ ಸಲ್ಲಿಸಿದ್ದೇ‌ನೆ. 37 ಸಾವಿರ ಹಣವನ್ನು ಕಟ್ಟಿದ್ದೇನೆ. 2006 ರಲ್ಲಿ ನಾನು ಸಿಎಂ ಆಗಿದ್ದಾಗ ಯಾರಿಗಾದರೂ ಹೇಳಿದ್ದರೆ ಮನೆಗೆ ಫೈಲ್ ತಂದು ಕೊಡುತ್ತಿದ್ದರು. ಆದರೆ ಆಗಲೂ ಪ್ರಭಾವ ಬಳಸಿ ನಿವೇಶನ ಪಡೆಯಲಿಲ್ಲ. ಮುಡಾದಲ್ಲಿ ನಿವೇಶನ ಸಿಗದಿರುವುದೇ ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಒಂದು ವೇಳೆ ನಿವೇಶನ ಮಂಜೂರಾಗಿದ್ದರೆ ಅದನ್ನೇ ದೊಡ್ಡದು ಮಾಡುತ್ತಿದ್ದರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜೆಡಿಎಲ್ ಪಿ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಾ‌.ರಾ.ಮಹೇಶ್, ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕರುಗಳಾದ ಕೆ.ಮಹದೇವ್, ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News