ಟಿಕೆಟ್‌ ಘೋಷಣೆಗೂ ಮುನ್ನ ಸಂಸದ ಪ್ರತಾಪ್ ಸಿಂಹ ವಿಚಲಿತರಾಗಿ ಮಾತನಾಡುವುದು ಬೇಡ: ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ

Update: 2024-03-12 14:45 GMT

ಮೈಸೂರು: ಟಿಕೆಟ್‌ ಘೋಷಣೆಗೂ ಮುನ್ನವೇ ಸಂಸದ ಪ್ರತಾಪ್ ಸಿಂಹ ಅವರು ಭಾವನಾತ್ಮಕ ಮತ್ತು ವಿಚಲಿತರಾಗಿ ಮಾತನಾಡುವುದು ಬೇಡ ಎಂದು ಬಿಜೆಪಿ ಶಾಸಕ ಟಿ.ಎಸ್‌‍. ಶ್ರೀವತ್ಸ ಮನವಿ ಮಾಡಿದರು.

ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೂ ಟಿಕೆಟ್‌ ಸಿಗಬಹುದು. ಹಾಗಾಗಿ ಆತಂಕಕ್ಕೆ ಒಳಗಾಗಿ ಮಾತಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ ಎಂದರು. ಪ್ರತಾಪ್ ಸಿಂಹ ಅವರು ಕೇಂದ್ರದ ನಾಯಕರೊಂದಿಗೆ ಮಾತನಾಡಲು ಬೆಂಗಳೂರಿಗೆ ಹೋಗಿದ್ದಾರೆ. ಇನ್ನೂ ಚರ್ಚೆಗಳು ನಡೆಯುತ್ತಿದೆ. ಭಾವನಾತ್ಮಕವಾಗಿ ಮಾತಾಡಿದರೆ ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ ಎಂದರು.

ಬಿಜೆಪಿ ನಗರಾಧ್ಯಕ್ಷ ಎಲ್‌.ನಾಗೇಂದ್ರ ಮಾತನಾಡಿ, ಮೈಸೂರು ಲೋಕಸಭಾ ಟಿಕೆಟ್‌ ವಿಚಾರವಾಗಿ ಎರಡು ದಿನಗಳಿಂದ ಗೊಂದಲ ಶುರುವಾಗಿದೆ. ಪ್ರತಾಪ್ ಸಿಂಹ ಅವರ ಬದಲು ಬೇರೆ ಹೆಸರು ಮುನ್ನೆಲೆಗೆ ಬಂದಿದೆ. ರಾಜ್ಯದ ಯಾವ ನಾಯಕರಿಗೂ ಟಿಕೆಟ್‌ ಘೋಷಿಸುವ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು.

10 ವರ್ಷಗಳ ಹಿಂದೆ ಪ್ರತಾಪ್ ಸಿಂಹ ಅವರು ಮೈಸೂರಿಗೆ ಬಂದಾಗ ಪರಿಚಯವೇ ಇರಲಿಲ್ಲ. ಅವರನ್ನು ಗೆಲ್ಲಿಸಿದೆವು. ಪ್ರತಾಪ್ ಸಿಂಹ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಪಕ್ಷದ ತೀರ್ಮಾನ ಒಪ್ಪಬೇಕಾಗುತ್ತದೆ. ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡಬೇಕಾಗುತ್ತದೆ ಎಂದು ವಿವರಿಸಿದರು.

ಮಹಾರಾಜರು ಮೈಸೂರು ಅಭಿವೃದ್ಧಿಗೆ ತಮ್ಮ ಸರ್ವಸ್ವವನ್ನು ಅರ್ಪಿಸಿದ್ದಾರೆ. ಈಗ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ತಿಳಿಸಿದರು.

ಪಕ್ಷದೊಳಗೆ ಯಾವುದೇ ಒಡಕಿಲ್ಲ. ಟಿಕೆಟ್‌ ಬದಲಿಸುವ ಪ್ರಯತ್ನವನ್ನೂ ಸ್ಥಳೀಯ ನಾಯಕರು ಮಾಡಿಲ್ಲ. ನಾಯಕರಾದ ಕೆ.ಎಸ್‌‍. ಈಶ್ವರಪ್ಪ ಅವರು ಅಭಿಪ್ರಾಯ ಸಂಗ್ರಹಿಸಿದ್ದರು. ಡಾ.ಮಂಜುನಾಥ್‌ ಮತ್ತು ಅಪ್ಪಚ್ಚು ರಂಜನ್‌ ಟಿಕೆಟ್‌ಗೆ ಆಪೇಕ್ಷೆಪಟ್ಟಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫೇಸಬುಕ್‌ ಲೈವ್‌ನಲ್ಲಿ ನಡವಳಿಕೆಯಿಂದಲೇ ಎಲ್‌.ನಾಗೇಂದ್ರ ಚುನಾವಣೆಯಲ್ಲಿ ಪರಾಭವಗೊಂಡರೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ನಡವಳಿಕೆಯಿಂದ ಪಕ್ಷಕ್ಕೆ ಯಾವುದೇ ಮುಜುಗರವಾಗಿಲ್ಲ. ನನ್ನ ನಡವಳಿಕೆ ಸರಿ ಇದ್ದ ಕಾರಣಕ್ಕೆ ನಗರಾಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಪ್ರತ್ಯುತ್ತರ ನೀಡಿದರು.

ಮಾಜಿ ಶಾಸಕ ಎಸ್‌‍.ಎ. ರಾಮದಾಸ್‌‍ ಮಾತನಾಡಿ, ಟಿಕೆಟ್‌ ಹಂಚಿಕೆ ವಿಚಾರವಾಗಿ ಪಾರ್ಲಿಮೆಂಟರಿ ಸಭೆ ನಡೆದಿಲ್ಲ. ಆದರೂ ಅನವಶ್ಯಕ ಚರ್ಚೆ ನಡೆಯುತ್ತಿದೆ ಎಂದರು.

ನಾಲ್ಕು ಬಾರಿ ಶಾಸಕನಾಗಿದ್ದ ನನಗೆ ಹಿಂದಿನ ಚುನಾವಣೆಯಲ್ಲಿ ಟಿಕೆಟ್‌ ಕೊಡಲಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡುವುದಾಗಿ ನಾಯಕರು ಹೇಳಿದಾಗ ಒಪ್ಪಿದೆ. ಕಾರ್ಯಕರ್ತರ ಸಭೆಯಲ್ಲಿ ಪ್ರತಾಪ್ ಸಿಂಹ ಅವರು ನನಗೆ ಆಡಿದ ಮಾತುಗಳನ್ನು ನೆನಪಿಸಿಕೊಳ್ಳಬೇಕು. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುವುದು ನಮ್ಮ ಗುರಿ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಮುಖಂಡರಾದ ಸಂದೇಶ್‌ ಸ್ವಾಮಿ, ಕೇಬಲ್‌ ಮಹೇಶ್‌, ಗಿರಿಧರ್‌ ಮುಂತಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News