ಮೈಸೂರು | ಉದ್ಯೋಗ ನೀಡದ ಸಕ್ಕರೆ ಕಾರ್ಖಾನೆ ವಿರುದ್ದ ಅಹೋರಾತ್ರಿ ಪ್ರತಿಭಟನೆ : ಧರಣಿ ನಿರತ ಮಹಿಳೆ ಸಾವು

Update: 2024-03-23 18:45 GMT

ಮೈಸೂರು: ನಂಜನಗೂಡು ತಾಲೂಕು ಅಳಗಂಚಿ ಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಭೂಮಿ ಕಳೆದುಕೊಂಡ ರೈತರಿಗೆ ಕಾನೂನು ಪ್ರಕಾರ ಉದ್ಯೋಗ ನೀಡದೆ ವಂಚಿಸುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಭೂಮಿ ಕೊಟ್ಟ ರೈತರ ಕುಟುಂಬಗಳು, "ಕೆಐಎಡಿಬಿಗೆ ಭೂಮಿ ನೀಡಿದ ರೈತರ ಹಕ್ಕುಗಳ ಹೋರಾಟ ವೇದಿಕೆ" ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದು, ಹೋರಾಟದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ಇಂದು ಸಾವನ್ನಪ್ಪಿದ್ದಾರೆ.

32 ವರ್ಷಗಳ ಹಿಂದೆ ಕಾರ್ಖಾನೆಯ ನಿರ್ಮಾಣಕ್ಕಾಗಿ ಜಮೀನನ್ನು ನೀಡಿದ್ದ ಅಳಗಂಚಿ ಗ್ರಾಮದ ನಿಂಗಮ್ಮನವರು(65) ಪ್ರತಿಭಟನಾ ಸ್ಥಳದಲ್ಲಿ ಸ್ಥಳದಲ್ಲಿಯೇ ವಾಸ್ತವ್ಯ ಹೂಡಿ ಕಳೆದ 46 ದಿನಗಳಿಂದ ಬಿಸಿಲು, ಗಾಳಿ, ಚಳಿ ಎನ್ನದೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಹ ಪ್ರತಿಭಟನಾಕಾರರನ್ನು ಸದಾ ಹುರಿದುಂಬಿಸುತ್ತಾ, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಅವರು ಬಿಸಿಲಿನ ತೀವ್ರತೆಯನ್ನು ತಾಳಲಾಗದೇ ಇಂದು ಬೆಳಿಗ್ಗೆ ಅಸ್ವಸ್ಥಗೊಂಡಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.

ಅಗಲಿದ ನಿಂಗಮ್ಮನವರಿಗೆ ಪ್ರತಿಭಟನಾ ಸ್ಥಳದಲ್ಲಿಯೇ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮಾತನಾಡಿದ ಪ್ರತಿಭಟನಾಕಾರರು, ನಿಂಗಮ್ಮನವರ ಸಾವಿಗೆ, ಇಷ್ಟು ವರ್ಷ ಕಾಲ ಉದ್ಯೋಗವನ್ನು ನೀಡದೇ ರೈತರನ್ನು ಪ್ರತಿಭಟನಗೆ ಇಳಿಯುವಂತೆ ಮಾಡಿದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯು ನೇರ ಹೊಣೆಯಾಗಿದೆ. ಅಲ್ಲದೇ ಈ ಸಮಸ್ಯೆಯನ್ನು ಬಗೆಹರಿಸಲು ವಿಫಲವಾದ ಜಿಲ್ಲಾಡಳಿತ ಸಹ ಕಾರಣವಾಗಿದ್ದು, ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News