ಸಂಸತ್ ದಾಳಿ ಸಂಬಂಧ ʼಎಸ್‍ಎಫ್‍ಐʼ ಸಂಘಟನೆ ಮೇಲೆ ಸುಳ್ಳು ಸುದ್ದಿ ಹಬ್ಬಿಸಿರುವುದನ್ನು ಖಂಡಿಸಿ ಪ್ರತಿಭಟನೆ

Update: 2023-12-15 16:20 GMT

ಮೈಸೂರು: ಸಂಸತ್‍ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ವಿಧ್ಯಾರ್ಥಿ ಮುಖಂಡ ವಿಜಯ್ ಕುಮಾರ್ ಅವರನ್ನು ಮತ್ತು ವಿದ್ಯಾರ್ಥಿ ಸಂಘಟನೆಯನ್ನು ಗುರಿ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದರ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್ ಮತ್ತು ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಸದ ಪ್ರತಾಪ್ ಸಿಂಹ ವನ್ನು ರಕ್ಷಿಸುವ ಉದ್ದೇಶದಿಂದ ಬಿಜೆಪಿ ಐಟಿ ಸೆಲ್ ಮತ್ತು ಇತರೆ ಕೆಲವರು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಪ್ರಕರಣದ ಧಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ʼಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲು ಆಗುವುದಿಲ್ಲ. ಪುಲ್ವಾಮಾ,  ವಾಯು ನೆಲೆ ದಾಳಿ ಸೇರಿದಂತೆ ಹಲವು ಭಾವನಾತ್ಮಕ ವಿಚಾರಗಳನ್ನು ಮುಂದೆ ತಂದ ರೀತಿಯಲ್ಲಿ ಈ ಕೃತ್ಯವನ್ನು ಎಸಗಲು ಪ್ರಯತ್ನಿಸಿದರು. ಆದರೆ ಅದು ಅವರಿಗೆ ತಿರುಗುಬಾಣವಾದ ಹಿನ್ನಲೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್, ಕಮ್ಯುನಿಸ್ಟ್ ಸಂಘಟನೆಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಎಸ್‍ಎಫ್‍ಐ ಮೈಸೂರು ಜಿಲ್ಲಾಧ್ಯಕ್ಷ ಟಿ.ಎಸ್.ವಿಜಯ್ ಕುಮಾರ್ ಭಾವಚಿತ್ರವನ್ನು ಬಳಸಿಕೊಂಡು ಈತನೇ ಡಿ.ಮನೋರಂಜನ್ ಎಂದು ಸುಳ್ಳು ಪ್ರಚಾರವನ್ನು ಮಾಡುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರನ್ನು ರಕ್ಷಣೆ ಮಾಡಲು ಈ ಗಂಭೀರ ವಿಚಾರವನ್ನು ಬೇರೆಡೆಗೆ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಂಸದ ಪ್ರತಾಪ್ ಸಿಂಹ ಅವರನ್ನು ಬಿಡಬಾರದು. ಅವರನ್ನು ಕೂಡಲೇ ಬಂಧಿಸಿ  ತನಿಖೆ ನಡೆಸಿದರೆ ಇದರ ಹಿಂದಿನ ಕೃತ್ಯದ ಮಾಹಿತಿ ದೊರೆಯಲಿದೆ ಎಂದು ಒತ್ತಾಯಿಸಿದರು.

ಪ್ರಗತಿಪರ ಸಂಘಟನೆಯ ಉಗ್ರನರಸಿಂಹೇಗೌಡ ಮಾತನಾಡಿ, ಹೊಸ ಸಂಸತ್ ಭವನಕ್ಕೆ ಇರುವೆಯೂ ಸಹ ನುಸುಳಲು ಸಾಧ್ಯವಿಲ್ಲ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನದ ಒಳಗೆ ಇಂತಹ ಭಯೋತ್ಪಾದಕ ಕೃತ್ಯ ನಡೆದರೂ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.

ಮನೋರಂಜನ್ ಮತ್ತು ಸಾಗರ್ ಶರ್ಮಾ ಅವರಿಗೆ ಸಂಸದ ಪ್ರತಾಪ್ ಸಿಂಹ ಹೇಗೆ ವೀಕ್ಷಕರ ಪಾಸ್  ನೀಡಿದರು. ಆ ಹುಡುಗರು ಸಂಸತ್ ಒಳಗೆ ತಪಾಸಣೆ ಮಾಡುವ ಏಳು ಸ್ಥಳಗಳನ್ನು ಭೇದಿಸಿ ಹೇಗೆ ಹೊಗೆ ಬಾಂಬ್ ತೆಗೆದುಕೊಂಡು ಹೋದರು. ಇದಕ್ಕೆಲ್ಲಾ ಕೆಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಭೀಮನಗೌಡ,ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಶಿವಕುಮಾರ್, ದರ್ಶನ್, ವೀರಭದ್ರ, ರೈಸಂಘಟನೆಯ ಜಗದೀಶ್ ಸೂರ್ಯ, ಚಂದ್ರಶೇಖರ್, ಕಾರ್ಮಿಕ ಮುಖಂಡರಾದ ಜಯರಾಂ, ಕೆ.ಬಸವರಾಜ್,ಜಗನ್ನಾಥ್, ಪ್ರಗತಿಪರ ಮುಖಂಡ ಉಗ್ರನರಸೀಂಹೇಗೌಡ, ಬಸವಯ್ಯ,ಬಲಾರಂ,ರಾಜೇಂದ್ರ,ಸುಬ್ರಹ್ಮಣ್ಯ, ಲೀಲಾವತಿ,ಫಾರೂಖ್ ಅಲಿ ಖಾನ್,ಮೆಹಬೂಬ್, ನವೀನ್ ಕುಮಾರ್,ಕೃಷ್ಣಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News