ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ನಾವು ಕ್ರಮ ಜರುಗಿಸಲು ಆಗಲ್ಲ : ಅಸಹಾಯಕತೆ ಹೊರಹಾಕಿದ ಆರ್.ಅಶೋಕ್
ಮೈಸೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ನಾವು ಕ್ರಮ ಕೈಗೊಳ್ಳಲು ಆಗುವುದಿಲ್ಲ. ಎಲ್ಲವನ್ನೂ ಕೇಂದ್ರದ ನಾಯಕರು ಸರಿಪಡಿಸುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಆ ಮೂಲಕ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಯತ್ನಾಳ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, "ಯತ್ನಾಳ್ ಶಾಸಕರಾಗಿರುವವರು, ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಅವರ ಮೇಲೆ ನಾವು ಕ್ರಮ ಕೈಗೊಳ್ಳಲು ಆಗುವುದಿಲ್ಲ, ಕೇಂದ್ರದ ನಾಯಕರು ಎಲ್ಲವನ್ನು ಸರಿಪಡಿಸಲಿದ್ದಾರೆ. ಮುಂದಿನವಾರ ವರಿಷ್ಠರು ರಾಜ್ಯಕ್ಕೆ ಆಗಮಿಸಲಿದ್ದು, ಯತ್ನಾಳ್ ಅವರೊಂದಿಗೆ ಮಾತನಾಡಲಿದ್ದಾರೆ" ಎಂದು ಹೇಳಿದರು.
ಮಾಜಿ ಶಾಸಕ ಪ್ರೀತಂ ಗೌಡ ಪೋಸ್ಟರ್ ಸುಟ್ಟ ಬಗ್ಗೆ ಪ್ರತಿಕ್ರಿಯಿಸಿದ ಅರ್.ಅಶೋಕ್, "ಪ್ರೀತಂ ಗೌಡ ನಮ್ಮ ಪಕ್ಷ ಕಾರ್ಯಕರ್ತ, ನಾವು ಒಟ್ಟಾಗಿ ಹೋಗಬೇಕು ಎಂದಾಗ ಸಹಜವಾಗಿ ಇಂತ ಘಟನೆಗಳು ನಡೆಯುತ್ತವೆ. ನಮ್ಮ ಗುರಿ ಮುಂದಿನ ಚುನಾವಣೆಯನ್ಮು ಒಟ್ಟಾಗಿ ಎದುರಿಸಬೇಕು ಎನ್ನುವುದು. ಅಲ್ಲಿವರೆಗೂ ಮುಂದೆಯೂ ಇಂತಹ ಘಟನೆಗಳು ನಡೆಯಬಹುದು ಅವೆಲ್ಲವನ್ನು ಸರಿಪಡಿಸಿಕೊಂಡು ಹೋಗುತ್ತೇವೆ" ಎಂದರು.