ಪಕ್ಷೇತರನಾಗಿ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ : ಸಂಸದ ಪ್ರತಾಪ್‌ ಸಿಂಹ ಸ್ಪಷ್ಟನೆ

Update: 2024-03-13 10:55 GMT

ಮೈಸೂರು: ನಾನು ಮೋದಿ ಭಕ್ತ. ಸಾಯೋವರೆಗೂ ಮೋದಿ, ಬಿಜೆಪಿ ಜೊತೆಗೆ ಇರುತ್ತೇನೆ ಹೊರತು ಪಕ್ಷೇತರನಾಗಿ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ 2014 ಮಾಚ್೯ 13 ರಂದು ಮೈಸೂರಿನಿಂದ ಸ್ಪರ್ಧೆ ಮಾಡುವಂತೆ ಮೋದಿ ಟಿಕೆಟ್ ಕೊಟ್ಟರು. ಅದರಂತೆ ಎರಡು ಬಾರಿ ಹತ್ತು ವರ್ಷಗಳ ಕಾಲ ಸಂಸದನಾಗಿ ಕಲಸ ಮಾಡಿದ್ದೇನೆ. ಈ ಬಾರಿ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ ಕೊಡದಿದ್ದರೂ ಬಿಜೆಪಿ ಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ಪ್ರಶ್ನಾತೀತ ನಾಯಕ ಅವರು ಇಲ್ಲದಿದ್ದರೆ ಬಿಜೆಪಿಯೇ ಇಲ್ಲ. ಕೇವಲ 3 ಸ್ಥಾನ ಗಳಿಸಿದ್ದ ಬಿಜೆಪಿಯನ್ನು ಏಕಾಂಗಿಯಾಗಿ ಕಟ್ಟಿ ಬೆಳೆಸಿದ್ದಾರೆ. ದೇಶದಲ್ಲಿ ಮೋದಿ ಹೇಗೆ ರಾಜ್ಯದಲ್ಲಿ ಯಡಿಯೂರಪ್ಪ ಎಂದು ಹೇಳಿದರು.

ಈಗ ಬಿಜೆಪಿಯಲ್ಲಿರುವವರು ಯಾರೂ ಮೂಲ ಬಿಜೆಪಿಗರಲ್ಲ, ನಮ್ಮ ತಂದೆ 1967 ರಲ್ಲಿ ನಾಗಪುರದಲ್ಲಿ ಸಂಘದ ಸಭೆಯನ್ನು ಮಾಡಿದ್ದವರು. ಹತ್ತು ವರ್ಷಗಳ ಕಾಲ ಪಂಚಾಯಿತಿ ಚೇರ್ಮನ್ ಆಗಿದ್ದವರು. ಅಂತಹ ಸಂಘದ ಶಿಸ್ತಿನ ಸಿಪಾಯಿ ಮಗನಾಗಿ ನಾನು ಬಿಜೆಪಿ ಪಕ್ಷವನ್ನು ಕಟ್ಟುತ್ತೇನೆ ಎಂದು ಹೇಳಿದರು.

ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದರಿಂದ ಅವರಿಗೆ ಟಿಕೆಟ್ ಸಿಗುತ್ತಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಹೇಳಿಕೆ ಕುರಿತು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ಧರಾಮಯ್ಯ ಅವರು ಹೆಸರು ಕೆಡಿಸಿಕೊಂಡು 2018 ರ ಚುನಾವಣೆಯಲ್ಲಿ ಸೋತರೆ?. ಹೆಸರು ಕೆಡಿಸಿಕೊಂಡು ಬಾದಾಮಿಯಿಂದ ಬಂದರೆ?. ಎಷ್ಟು ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಅವರು ಸೋತಿಲ್ಲ ಒಬ್ಬ ಹಿರಿಯ ರಾಜಕಾರಣಿಯಾಗಿ ಹೀಗೆಲ್ಲಾ ಮಾತನಾಡಬಾರದು ಎಂದರು.

ಸಿದ್ಧರಾಮಯ್ಯ ಅವರಿಗೂ ನಮಗೂ ಸೈದ್ಧಾಂತಿಕವಾಗಿ ವಿರೋಧ ಇದೆ. ಆದರೆ ಅವರ ಬಗ್ಗೆ ನನಗೆ ಅಪಾರ ಗೌರವಿದೆ. ಪ್ರೀತಿ ಇದೆ. ಮೈಸೂರಿನ ನಾಗರೀಕನಾಗಿ ನಮ್ಮ ಮುಖ್ಯಮಂತ್ರಿ ಎಂಬ ಹೆಮ್ಮೆಯಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News