ತೆಲಂಗಾಣದ 10ನೇ ತರಗತಿ ಪಠ್ಯಪುಸ್ತಕದಲ್ಲಿ ಮುದ್ರಣವಾಗಿರುವ ಸಂವಿಧಾನ ಪೀಠಿಕೆಯಿಂದ ಸಮಾಜವಾದಿ, ಜಾತ್ಯತೀತ ಪದಗಳು ಕಣ್ಮರೆ

ಹೈದರಾಬಾದ್: ತನ್ನ ಪುಠ್ಯಪುಸ್ತಕವೊಂದರ ಮೇಲೆ 'ಸಮಾಜವಾದಿ', 'ಜಾತ್ಯತೀತ' ಪದಗಳನ್ನು ಕೈಬಿಟ್ಟು ಸಂವಿಧಾನದ ಪೀಠಿಕೆಯನ್ನು ಮುದ್ರಿಸಿರುವ ತೆಲಂಗಾಣ ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಯು ವಿವಾದಕ್ಕೆ ಗುರಿಯಾಗಿದೆ ಎಂದು ಶನಿವಾರ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

Update: 2023-06-24 13:34 GMT
Editor : Muad | Byline : ವಾರ್ತಾಭಾರತಿ

ಸಾಂದರ್ಭಿಕ ಚಿತ್ರ: PTI

ಹೈದರಾಬಾದ್: ತನ್ನ ಪುಠ್ಯಪುಸ್ತಕವೊಂದರ ಮೇಲೆ 'ಸಮಾಜವಾದಿ', 'ಜಾತ್ಯತೀತ' ಪದಗಳನ್ನು ಕೈಬಿಟ್ಟು ಸಂವಿಧಾನದ ಪೀಠಿಕೆಯನ್ನು ಮುದ್ರಿಸಿರುವ ತೆಲಂಗಾಣ ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಯು ವಿವಾದಕ್ಕೆ ಗುರಿಯಾಗಿದೆ ಎಂದು ಶನಿವಾರ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

The Indian Express ಪತ್ರಿಕೆಯ ಪ್ರಕಾರ, ತೆಲಂಗಾಣ ಶಿಕ್ಷಣ ದಿನಾಚರಣೆಯ ಅಂಗವಾಗಿ ಜೂನ್ 20ರಂದು ವಿದ್ಯಾರ್ಥಿಗಳಿಗೆ ವಿತರಿಸಲಾಗಿರುವ 10ನೇ ತರಗತಿಯ ಹೊಸ ಸಮಾಜ ಶಾಸ್ತ್ರ ಪಠ್ಯಪುಸ್ತಕದಲ್ಲಿ ಈ ಲೋಪ ಕಂಡು ಬಂದಿದೆ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಕರೊಬ್ಬರು, "ಪಠ್ಯಪುಸ್ತಕದ ಒಳಪುಟದಲ್ಲಿ ಮುದ್ರಣಗೊಂಡಿರುವ ಸಂವಿಧಾನ ಪೀಠಿಕೆಯಲ್ಲಿ 'ಸಮಾಜವಾದಿ', 'ಜಾತ್ಯತೀತ' ಪದಗಳಿವೆ. ಆದರೆ, ಈ ಗಂಭೀರ ಲೋಪವು ರಕ್ಷಾಪುಟದಲ್ಲಿ ಮಾತ್ರ ಆಗಿದೆ" ಎಂದು ತಿಳಿಸಿದ್ದಾರೆ.

"ಈ ಲೋಪವು ಕಣ್ತಪ್ಪಿನಿಂದಾಗಿದೆ. ರಕ್ಷಾಪುಟ ವಿನ್ಯಾಸದ ಚಿತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಅನುದ್ದೇಶಿತವಾಗಿ ಈ ಲೋಪ ಸಂಭವಿಸಿದೆ. ಈ ಲೋಪವು ನಿರ್ಲಕ್ಷ್ಯದಿಂದ ಹಾಗೆ ಉಳಿದಿದೆ" ಎಂದು ತೆಲಂಗಾಣ ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಯ ನಿರ್ದೇಶಕ ಎಂ.ರಾಧಾರೆಡ್ಡಿ ಪ್ರಕಟಣೆಯೊಂದರಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, "ಪಠ್ಯಪುಸ್ತಕದ ರಕ್ಷಾಪುಟದಲ್ಲಿ ಇಂತಹ ಗಂಭೀರ ಲೋಪ ಅಚಾತುರ್ಯದಿಂದ ಆಗಲು ಸಾಧ್ಯವಿಲ್ಲವಾದ್ದರಿಂದ ಈ ಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಮುದ್ರಿಸಲಾಗಿದೆ" ಎಂದು ತೆಲಂಗಾಣ ರಾಜ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಚಾವಾ ರವಿ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತೆಲಂಗಾಣ ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಗೆ ಪತ್ರ ಬರೆದಿರುವ ಶಿಕ್ಷಕರ ಸಂಘವು, "ತೆಲಂಗಾಣ ರಾಜ್ಯ ಸರ್ಕಾರ ಮುದ್ರಿಸಿರುವ ಪಠ್ಯಪುಸ್ತಕದ ಮೇಲೆ ಕೆಲವರ ಬಯಕೆಯಂತೆ ಹಾಲಿ ಸಂವಿಧಾನ ಪೀಠಿಕೆಯನ್ನು ಮುದ್ರಿಸುವ ಬದಲು ಹಳೆಯ ಸಂವಿಧಾನ ಪೀಠಿಕೆಯನ್ನು ಮುದ್ರಿಸಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ. ಈ ಸಂಬಂಧ ತನಿಖೆ ನಡೆಸಬೇಕು" ಎಂದು ಆಗ್ರಹಿಸಿದೆ.

1950ರಲ್ಲಿ ಅಳವಡಿಸಿಕೊಳ್ಳಲಾಗಿದ್ದ ಸಂವಿಧಾನದಲ್ಲಿ ಈ ಎರಡು ಪದಗಳು ಸೇರಿರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಈ ಪದಗಳನ್ನು ಸಂವಿಧಾನ ಪೀಠಿಕೆಗೆ ಸೇರ್ಪಡೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News