ಸೊರೇನ್ ಜಾಮೀನು ಅರ್ಜಿಗೆ ಜೂ. 10ರ ಮೊದಲು ಪ್ರತಿಕ್ರಿಯೆ ನೀಡಿ: ಅನುಷ್ಠಾನ ನಿರ್ದೇಶನಾಲಯಕ್ಕೆ ಜಾರ್ಖಂಡ್ ಹೈಕೋರ್ಟ್ ನಿರ್ದೇಶನ
ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಜಾಮೀನು ಕೋರಿ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಲ್ಲಿಸಿರುವ ಅರ್ಜಿಗೆ ಜೂನ್ 10ರ ಒಳಗೆ ಉತ್ತರಿಸುವಂತೆ ಜಾರ್ಖಂಡ್ ಹೈಕೋರ್ಟ್ ಮಂಗಳವಾರ ಅನುಷ್ಠಾನ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದೆ.
ಅನುಷ್ಠಾನ ನಿರ್ದೇಶನಾಲಯವು ಜನವರಿ 31ರಂದು ಜಾರ್ಖಂಡ್ ಮುಕ್ತಿ ಮೋರ್ಚ ನಾಯಕನನ್ನು ಬಂಧಿಸಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯವು ಹೇಮಂತ್ ಸೊರೇನ್ರನ್ನು ಪ್ರಶ್ನಿಸಿದ ಬಳಿಕ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ನೀಡಿದ ಸ್ವಲ್ಪವೇ ಹೊತ್ತಿನ ಬಳಿಕ ಅವರನ್ನು ಬಂಧಿಸಲಾಗಿತ್ತು.
ರಾಂಚಿ ಮತ್ತು ಕೋಲ್ಕತದ ಅಧಿಕೃತ ಭೂ ದಾಖಲೆಗಳನ್ನು ತಿರುಚುವ ಕಾರ್ಯದಲ್ಲಿ ಜಾರ್ಖಂಡ್ನ ‘‘ಭೂ ಮಾಫಿಯ’’ವು ಶಾಮೀಲಾಗಿದೆ ಎಂದು ಅನುಷ್ಠಾನ ನಿರ್ದೇಶನಾಲಯವು ಆರೋಪಿಸಿದೆ. ನಕಲಿ ದಾಖಲೆಗಳ ಮೂಲಕ ವಶಪಡಿಸಿಕೊಳ್ಳಲಾಗಿರುವ ಕೆಲವು ಜಮೀನುಗಳು ಸೊರೇನ್ರ ವಶದಲ್ಲಿವೆ ಎಂದು ನಿರ್ದೇಶನಾಲಯವು ಆರೋಪಿಸಿದೆ.
ಮೇ 22ರಂದು, ಅನುಷ್ಠಾನ ನಿರ್ದೇಶನಾಲಯವು ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಸೊರೇನ್ ವಾಪಸ್ ಪಡೆದುಕೊಂಡಿದ್ದರು. ತನ್ನ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಅವರು ಸುಪ್ರೀಂ ಕೊರ್ಟ್ಗೆ ಹೋಗಿದ್ದರು.
ಸೋಮವಾರ, ಸೊರೇನ್ ಜಾರ್ಖಂಡ್ ಹೈಕೋರ್ಟ್ನಲ್ಲಿ ಜಾಮೀನು ಕೋರಿ ಹೊಸ ಅರ್ಜಿ ಸಲ್ಲಿಸಿದ್ದಾರೆ. ತನ್ನ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ‘‘8.5 ಎಕರೆಗೂ ಹೆಚ್ಚಿನ ಜಮೀನು ಖರೀದಿಗೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯವು ನನ್ನ ವಿರುದ್ಧ ಕ್ರಮ ತೆಗೆದುಕೊಂಡಿದೆ. ಆದರೆ ಆ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಸೊರೇನ್ ಹೆಸರಿಲ್ಲ ಎಂದು ಹೊಸ ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.
ಅದೂ ಅಲ್ಲದೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ನಾನು ಅಪರಾಧ ಮಾಡಿರುವ ಬಗ್ಗೆ ಅನುಷ್ಠಾನ ನಿರ್ದೇಶನಾಲಯವು ಯವುದೇ ಸಾಕ್ಷಿ ಒದಗಿಸಿಲ್ಲ ಎಂದು ಸೊರೇನ್ ಹೇಳಿದ್ದಾರೆ.
ಜಮೀನು ನನಗೆ ಸೇರಿದೆ ಎಂಬ ಕೆಲವು ವ್ಯಕ್ತಿಗಳ ಹೇಳಿಕೆಗಳ ಆಧಾರದಲ್ಲಿ ಮಾತ್ರ ಅನುಷ್ಠಾನ ನಿರ್ದೇಶನಾಲಯವು ಈಗ ಕಾರ್ಯಾಚರಣೆ ನಡೆಸುತ್ತಿದೆ; ‘‘ಆದರೆ ಇಂಥ ಹೇಳಿಕೆಗಳನ್ನು ಸಾಬೀತುಪಡಿಸಲು ಯಾವುದೇ ದಾಖಲೆಯಿಲ್ಲ’’ ಎಂದು ಅವರು ಹೇಳಿದರು.