ಪಾಕಿಸ್ತಾನದ ಜೈಲಿನಿಂದ 18 ಕೈದಿಗಳು ಪರಾರಿ : ವರದಿ

Update: 2024-07-01 17:17 GMT

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್, ಜು.1: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ರಾವಲ್‍ಕೋಟ್ ಜಿಲ್ಲೆಯ ಜೈಲಿನಲ್ಲಿ ಶನಿವಾರ ಕೈದಿಗಳು ಭದ್ರತಾ ಸಿಬಂದಿಯ ಮೇಲೆ ಮುಗಿಬಿದ್ದು ಜೈಲಿನಿಂದ ಪರಾರಿಯಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.

18 ಕೈದಿಗಳ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದರೆ ಓರ್ವ ಕೈದಿ ಪರಾರಿಯಾಗುವ ಪ್ರಯತ್ನದಲ್ಲಿ ಗಾಯಗೊಂಡು ಭದ್ರತಾ ಸಿಬಂದಿಗೆ ಸಿಕ್ಕಿಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಾರಿಯಾದ ಕೈದಿಗಳಲ್ಲಿ 6 ಮಂದಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು ಎಂದು ವರದಿಯಾಗಿದೆ.

ನಗರದ ಕೇಂದ್ರಭಾಗದಲ್ಲಿ ಜಿಲ್ಲಾ ನ್ಯಾಯಾಲಯಗಳ ಬಳಿಯಿರುವ ಈ ಜೈಲಿನ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ನಗರದ ಹೊರಭಾಗದಲ್ಲಿ ಹೊಸ ಜೈಲುಕಟ್ಟಡ ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿ ಉಪ ಅಧೀಕ್ಷಕ ಸಹಿತ 8 ಜೈಲು ಅಧಿಕಾರಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ತನಿಖಾ ತಂಡವನ್ನು ರಚಿಸಿದ್ದು ವಾರದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಸ್ಥಳೀಯ ಸರಕಾರ ವರದಿ ಮಾಡಿದೆ.

ಜೈಲಿನ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು ಬಂದೀಖಾಖೆಯ ಐಜಿಪಿ ಬಾದರ್ ಮುನೀರ್ ಅವರನ್ನು ವಜಾಗೊಳಿಸಲಾಗಿದೆ ಎಂದು ಮಾಹಿತಿ ಕಾರ್ಯದರ್ಶಿ ಅನ್ಸಾರ್ ಯಾಕೂಬ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಜೈಲಿನ ಹೊರಗಿಂದ ಎಸೆಯಲಾದ ಪಿಸ್ತೂಲನ್ನು ಬಳಸಿ ಜೈಲಿನ ಮುಖ್ಯದ್ವಾರದ ಬೀಗವನ್ನು ಒಡೆಯಲಾಗಿದೆ. ಬಳಿಕ ಜಿಲ್ಲೆಯ ಎಲ್ಲಾ ಪೊಲೀಸ್ ವಿಭಾಗಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆಗಳನ್ನು ಸೀಲ್ ಮಾಡಲಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News