8 ಸಂಪುಟ ಸಮಿತಿಗಳ ಪುನರ್ ರಚನೆ: ಎನ್ ಡಿಎ ಮಿತ್ರಪಕ್ಷಗಳಿಗೆ ಅವಕಾಶ

Update: 2024-07-04 02:48 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ ಬುಧವಾರ ಎಂಟು ಸಂಪುಟ ಸಮಿತಿಗಳನ್ನು ಪುನರ್ ರಚನೆ ಮಾಡಿದ್ದು, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸೇರಿದಂತೆ ಎಲ್ಲ ಪ್ರಮುಖ ಸಂಪುಟ ಸಮಿತಿಗಳಲ್ಲಿ ಎನ್ ಡಿಎ ಮಿತ್ರಪಕ್ಷಗಳಿಗೆ ಅವಕಾಶ ಕಲ್ಪಿಸಿದೆ.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಇರುವ ಭದ್ರತೆ ಕುರಿತ ಸಂಪುಟ ಸಮಿತಿಯಲ್ಲಿ ಯಾವುದೇ ಬಲಾವಣೆ ಇಲ್ಲ ಎಂದು ಅಧಿಸೂಚನೆಯಿಂದ ತಿಳಿದುಬರುತ್ತದೆ. ಅಂತೆಯೇ ನೇಮಕಾತಿ ಕುರಿತ ಸಂಪುಟ ಸಮಿತಿಯಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರಷ್ಟೇ ಸಮಿತಿಯಲ್ಲಿ ಇರುತ್ತಾರೆ.

ಸಿಸಿಇಎ ಸಮಿತಿಯಲ್ಲಿ ಭಾರಿ ಕೈಗಾರಿಕೆಗಳು ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್) ಮತ್ತು ಪಂಜಾಯತ್ರಾಜ್ ಮತ್ತು ಪಶುಸಂಗೋಪನೆ ಖಾತೆ ಸಚಿವ ಲಲನ್ ಸಿಂಗ್ (ಜೆಡಿಯು) ಸ್ಥಾನ ಪಡೆದಿದ್ದಾರೆ. 2019ರ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಸಂಪುಟ ಸಮಿತಿಗಳ ಪುನರ್ರಚನೆ ನಡೆದಿದೆ. 2020ರ ಆಗಸ್ಟ್ ನಲ್ಲಿ ಅಕಾಲಿದಳ ಮುಖಂಡ ಹರ್ ಸಿಮ್ರತ್ ಕೌರ್ ಬಾದಲ್ ಅವರನ್ನು ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮ್, ಜೈಶಂಕರ್, ಪಿಯೂಶ್ ಗೋಯಲ್ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇರುತ್ತಾರೆ. ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಎಂಎಸ್ಎಂಇ ಸಚಿವ ಜಿತಿನ್ ರಾಂ ಮಾಝಿ (ಎಚ್ಎಎಂ) ಮತ್ತು ನಾಗರಿಕ ವಿಮಾನಯಾನ ಖಾತೆ ಸಚಿವ ಕೆ.ರಾಮಮೋಹನ ನಾಯ್ಡು (ಟಿಡಿಪಿ) ಇದ್ದಾರೆ. ಈ ಸಮಿತಿಯಲ್ಲಿದ್ದ ಪ್ರಹ್ಲಾದ್ ಜೋಶಿ, ಮುನ್ ಸುಖ್ ಮಾಂಡವಿಯಾ ಮತ್ತು ಗಿರಿರಾಜ್ ಸಿಂಗ್ ಅವರನ್ನು ಬೇರೆ ಸಮಿತಿಗೆ ವರ್ಗಾಯಿಸಲಾಗಿದೆ. 2024ರ ಚುನಾವಣೆಯಲ್ಲಿ ಸೋಲು ಅನುಭವಿಸಿದ ಸ್ಮೃತಿ ಇರಾನಿ ಸಮಿತಿಯಿಂದ ನಿರ್ಗಮಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News