ಕೇರಳ:‌ ‘ಮಿದುಳು ತಿನ್ನುವ ಅಮೀಬಾ’ ಸೋಂಕಿನ ನಾಲ್ಕನೇ ಪ್ರಕರಣ ದಾಖಲು

Update: 2024-07-06 15:40 GMT

PC : thehindu.com

ಕೋಝಿಕ್ಕೋಡ್: ಕೇರಳದಲ್ಲಿ ಅಪರೂಪದ ʼಮಿದುಳು ತಿನ್ನುವ ಅಮೀಬಾ’ ಸೋಂಕಿನ (ಅಮೀಬಿಕ್ ಮೆನಿಂಗೊಎನ್ಸೆಫಾಲೈಟಿಸ್) ನಾಲ್ಕನೇ ಪ್ರಕರಣವು ದಾಖಲಾಗಿದೆ. ಕಲುಷಿತ ನೀರಿನಲ್ಲಿಯ ಅಮೀಬಾ ಈ ಮಿದುಳು ಸೋಂಕಿಗೆ ಕಾರಣವಾಗುತ್ತದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ನಾಲ್ಕಕ್ಕೇರಿದೆ.

ವರದಿಯ ಪ್ರಕಾರ, ರೋಗಿ ಕೋಝಿಕ್ಕೋಡ್ ಜಿಲ್ಲೆಯ ಪಯ್ಯೋಳಿ ನಿವಾಸಿ 14ರ ಹರೆಯದ ಬಾಲಕನಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೇ ತಿಂಗಳಿನಿಂದ ರಾಜ್ಯದಲ್ಲಿ ಇಂತಹ ನಾಲ್ಕು ಪ್ರಕರಣಗಳು ವರದಿಯಾಗಿವೆ. ಎಲ್ಲ ರೋಗಿಗಳು ಅಪ್ರಾಪ್ತ ವಯಸ್ಕರಾಗಿದ್ದು,ಈ ಪೈಕಿ ಮೂವರು ಈಗಾಗಲೇ ಮೃತಪಟ್ಟಿದ್ದಾರೆ.

ತಾಜಾ ಪ್ರಕರಣದಲ್ಲಿ,ಬಾಲಕನನ್ನು ಜು.1ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆತನ ಸ್ಥಿತಿ ಸುಧಾರಿಸುತ್ತಿದೆ. ಆಸ್ಪತ್ರೆಯಲ್ಲಿ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲಾಗಿತ್ತು ಮತ್ತು ವಿದೇಶಗಳಿಂದ ತರಿಸಲಾದ ಔಷಧಿಗಳು ಸೇರಿದಂತೆ ಚಿಕಿತ್ಸೆಯನ್ನು ತಕ್ಷಣ ಆರಂಭಿಸಲಾಗಿತ್ತು ಎಂದು ವೈದ್ಯರೋರ್ವರು ಶನಿವಾರ ತಿಳಿಸಿದರು.

ಜು.3ರಂದು ಅಮೀಬಾ ಸೋಂಕು ಪೀಡಿತನಾಗಿದ್ದ 14ರ ಹರೆಯದ ಬಾಲಕನೋರ್ವ ಮೃತಪಟ್ಟಿದ್ದ. ಅದಕ್ಕೂ ಮುನ್ನ ಮೇ 21ರಂದು ಮಲಪ್ಪುರಂನ 5ರ ಹರೆಯದ ಬಾಲಕಿ ಮತ್ತು ಜೂ.25ರಂದು ಕಣ್ಣೂರಿನ 13ರ ಹರೆಯದ ಬಾಲಕಿ ಈ ಅಪರೂಪದ ಸೋಂಕಿಗೆ ಬಲಿಯಾಗಿದ್ದರು.

ಶುಕ್ರವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಸಭೆಯಲ್ಲಿ ಮತ್ತಷ್ಟು ಸೋಂಕನ್ನು ತಡೆಯಲು ಕಲುಷಿತ ನೀರಿನಲ್ಲಿ ಸ್ನಾನ ಮಾಡದಿರುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಲಾಗಿದೆ.

ಈಜುಕೊಳಗಳ ಸೂಕ್ತ ಕ್ಲೋರಿನೇಷನ್ ಮಾಡಲು ಮತ್ತು ಮಕ್ಕಳು ಈ ಸೋಂಕಿಗೆ ಹೆಚ್ಚಾಗಿ ಗುರಿಯಾಗುತ್ತಿರುವುದರಿಂದ ಅವರು ಜಲಮೂಲಗಳಿಗೆ ಇಳಿಯುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದೂ ಸೂಚಿಸಲಾಗಿದೆ.

ಜಲಮೂಲಗಳನ್ನು ಸ್ವಚ್ಛವಾಗಿರಿಸಲು ಎಲ್ಲರೂ ಕಾಳಜಿ ವಹಿಸಬೇಕು ಎಂದೂ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News