ಉತ್ತರ ಪ್ರದೇಶ| ಕಳ್ಳತನದ ಶಂಕೆಯಲ್ಲಿ ಮತ್ತೋರ್ವ ವ್ಯಕ್ತಿಯ ಥಳಿಸಿ ಹತ್ಯೆ: ಸ್ಥಳೀಯರಿಂದ ಪ್ರತಿಭಟನೆ

Update: 2024-07-06 17:50 GMT

PC : Screenshot/X/Benarasiyaa

ಶಮ್ಲಿ (ಉತ್ತರ ಪ್ರದೇಶ): ಕಳವು ಮಾಡಿದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಥಳಿಸಿ ಹತ್ಯೆಗೈದಿರುವ ಮತ್ತೊಂದು ಘಟನೆ ಶುಕ್ರವಾರ ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಫಿರೋಝ್ ಕುರೇಷಿ ಎಂದು ಗುರುತಿಸಲಾಗಿದೆ.

ಫಿರೋಝ್ ಕುರೇಷಿ ಕೆಲಸಕ್ಕೆಂದು ಗಂಗಾ ಆರ್ಯನಗರದ ಜಲಾಲಾಬಾದ್ ಪ್ರದೇಶಕ್ಕೆ ತೆರಳಿದ್ದಾಗ, ಆತನನ್ನು ಕಳ್ಳನೆಂದು ಆರೋಪಿಸಿರುವ ಪಿಂಕಿ ಮತ್ತು ಪಂಕಜ್ ರಾಜೇಂದ್ರ ನೇತೃತ್ವದ ಗುಂಪೊಂದು ಆತನನ್ನು ಅಮಾನುಷವಾಗಿ ಥಳಿಸಿದೆ. ಫಿರೋಝ್‌ನನ್ನು ಗುಂಪು ಹಲ್ಲೆಯಿಂದ ರಕ್ಷಿಸಲು ಕೆಲವು ಸ್ಥಳೀಯರು ಪ್ರಯತ್ನಿಸಿದರಾದರೂ, ತೀವ್ರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

"ಇಂದು ಸಂಜೆ ಫಿರೋಝ್ ಕೆಲಸಕ್ಕೆಂದು ಹೊರಗೆ ಹೋಗಿದ್ದ. ಆದರೆ, ಗುಂಪೊಂದು ಆತನನ್ನು ಬರ್ಬರವಾಗಿ ಥಳಿಸಿದ್ದರಿಂದ, ತೀವ್ರವಾಗಿ ಗಾಯಗೊಂಡಿದ್ದ ಆತ, ನಂತರ ಮೃತಪಟ್ಟಿದ್ದಾನೆ" ಎಂದು ಫಿರೋಝ್ ಸಹೋದರ ಅಫ್ಝಾ ಹೇಳಿದ್ದಾರೆ ಎಂದು The Observer Post ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಫಿರೋಝ್ ಗುಜರಿ ಕೆಲಸಗಾರನಾಗಿದ್ದ. ಆತನಿಗೆ ಯಾವುದೇ ಅಪರಾಧದ ಹಿನ್ನೆಲೆ ಇರಲಿಲ್ಲ. ಆತನಿಗೆ ಕುಟುಂಬವಿದ್ದು, ಮೂವರು ಮಕ್ಕಳಿದ್ದಾರೆ. ಆತ ಕಳ್ಳನಾಗಿರಲಿಲ್ಲ ಹಾಗೂ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆತ ಕುಟುಂಬಸ್ಥನಾಗಿದ್ದ. ಆತನನ್ನು ಯಾಕೆ ಹತ್ಯೆ ಮಾಡಲಾಯಿತು ಎಂದು ನಮಗೆ ಅರ್ಥವಾಗುತ್ತಿಲ್ಲ" ಎಂದೂ ಅಫ್ಝಲ್ ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಫಿರೋಝ್ ಕುಟುಂಬದ ಸದಸ್ಯರು ನೀಡಿದ ದೂರನ್ನು ಆಧರಿಸಿ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ಆರೋಪಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಫಿರೋಝ್ ಕುಟುಂಬದ ಸದಸ್ಯರು ಹಾಗೂ ಜಲಾಲಾಬಾದ್‌ನ ಸ್ಥಳೀಯ ಮುಸ್ಲಿಂ ನಿವಾಸಿಗಳು ಪೊಲೀಸ್ ಠಾಣೆಯ ಎದುರು ಫಿರೋಝ್‌ನ ಮೃತದೇಹವನ್ನಿಟ್ಟು ಪ್ರತಿಭಟಿಸಿದರು ಎಂದು ವರದಿಯಾಗಿದೆ.

ಕೇವಲ ಒಂದು ತಿಂಗಳ ಹಿಂದೆ ಮುಹಮ್ಮದ್ ಫರೀದ್ ಎಂಬ ಮೂವತ್ತೈದು ವರ್ಷದ ವ್ಯಕ್ತಿಯನ್ನು ಕಳ್ಳನೆಂದು ಶಂಕಿಸಿ ದುಷ್ಕರ್ಮಿಗಳು ಥಳಿಸಿ ಹತ್ಯೆಗೈದ ಬೆನ್ನಿಗೇ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News