ಪ್ರಧಾನಿಗಾಗಿ ವಿಶೇಷ ಚೂರ್ಮಾ ಮಾಡುತ್ತೇನೆ: ನೀರಜ್ ಚೋಪ್ರಾ ತಾಯಿ

Update: 2024-07-06 17:07 GMT

ನರೇಂದ್ರ ಮೋದಿ , ನೀರಜ್ ಚೋಪ್ರಾರ , ಸರೋಜ್ ದೇವಿ |  PC : (PTI and IANS)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ನಾನು ವಿಶೇಷ ಚೂರ್ಮಾ ಮಾಡುತ್ತೇನೆ ಎಂದು ಒಲಿಂಪಿಕ್ ಚಿನ್ನ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ತಾಯಿ ಸರೋಜ್ ದೇವಿ ಹೇಳಿದ್ದಾರೆ.

ನೀರಜ್ ಚೋಪ್ರಾರ ತಾಯಿ ಮಾಡಿದ ಚೂರ್ಮಾ ತಿನ್ನಬೇಕೆಂದು ಮೋದಿ ಅವರು ವ್ಯಕ್ತಪಡಿಸಿರುವ ಬಯಕೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಗುರುವಾರ ಮೋದಿ ತನ್ನ ನಿವಾಸದಲ್ಲಿ ನೀರಜ್ ಚೋಪ್ರಾ ಜೊತೆಗೆ ಮಾತನಾಡುತ್ತಿದ್ದಾಗ, ಚೋಪ್ರಾರ ತಾಯಿ ಮಾಡಿದ ಚೂರ್ಮಾ ತಿನ್ನಬೇಕೆಂದು ತನಗೆ ಆಸೆಯಿದೆ ಎಂದು ಹೇಳಿದ್ದರು. ಪ್ಯಾರಿಸ್ ಒಲಿಂಪಿಕ್ಸ್ಗೆ ತೆರಳುವ ಮುನ್ನ ತನ್ನನ್ನು ಭೇಟಿಯಾದ ಭಾರತೀಯ ಅತ್ಲೀಟ್ಗಳೊಂದಿಗೆ ಸಂವಹನ ನಡೆಸುತ್ತಿದ್ದಾಗ ಮೋದಿ ಲಘು ಧಾಟಿಯಲ್ಲಿ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು.

ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಂದು ಆರಂಭಗೊಳ್ಳಲಿದೆ.

‘‘ನನ್ನ ಚೂರ್ಮಾ ಇನ್ನೂ ಬಂದಿಲ್ಲ’’ ಎಂದು ನೀರಜ್ ಚೋಪ್ರಾ ಜೊತೆ ತಮಾಷೆಯಾಗಿ ಮಾತನಾಡುತ್ತಾ ಮೋದಿ ಹೇಳಿದ್ದರು. ಅದಕ್ಕೆ ಉತ್ತರಿಸಿದ ನೀರಜ್, ‘‘ಈ ಬಾರಿ ಹರ್ಯಾಣದ ಚೂರ್ಮಾ ತರುತ್ತೇನೆ, ಸರ್. ಹಿಂದಿನ ಸಲ ದಿಲ್ಲಿಯ ಸಿಹಿ ಚೂರ್ಮಾ ತಂದಿದ್ದೆ’’ ಎಂದಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘‘ನಿಮ್ಮ ಅಮ್ಮ ಮಾಡಿದ ಚೂರ್ಮಾ ತಿನ್ನಬೇಕೆಂದು ನನಗೆ ಆಸೆಯಾಗಿದೆ’’ ಎಂದು ಹೇಳಿದ್ದರು.

ಈಗ ಪ್ರಧಾನಿಯ ಕೋರಿಕೆಗೆ ಪ್ರತಿಕ್ರಿಯಿಸಿರುವ ಚೋಪ್ರಾರ ತಾಯಿ, ‘‘ನೀರಜ್ ಮತ್ತೊಮ್ಮೆ ಚಿನ್ನ ಗೆದ್ದು ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಭೇಟಿಯಾಗುವ ಅವಕಾಶ ಪಡೆಯುತ್ತಾರೆಂದು ನಾವು ಆಶಿಸುತ್ತೇವೆ. ಹೌದು, ಈ ಬಾರಿ ನಾನು ದೇಸಿ ತುಪ್ಪ, ಸಕ್ಕರೆ ಮತ್ತು ನೀರುಳ್ಳಿಯಿಂದ ಮಾಡಿರುವ ವಿಶೇಷ ಚೂರ್ಮಾವನ್ನು ಪ್ರಧಾನಿಗೆ ಕಳುಹಿಸುತ್ತೇನೆ’’ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News