ಅಸ್ಸಾಂನಲ್ಲಿ ತೀವ್ರಗೊಂಡ ನೆರೆ ಪರಿಸ್ಥಿತಿ: 30 ಜಿಲ್ಲೆಗಳ 24.50 ಲಕ್ಷ ಜನರು ಸಂತ್ರಸ್ತ

Update: 2024-07-06 16:51 GMT

Photo: PTI

ಗುವಾಹಟಿ: ಅಸ್ಸಾಂನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಶನಿವಾರ ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದ್ದು, 30 ಜಿಲ್ಲೆಗಳ 24.50 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಎಂದು ಸರಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಹಲವು ಸ್ಥಳಗಳಲ್ಲಿ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ವರ್ಷ ನೆರೆಯಿಂದ ಮೃತಪಟ್ಟವರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಭೂಕುಸಿತ ಹಾಗೂ ಚಂಡ ಮಾರುತದಿಂದಾಗಿ ಇತರ 12 ಮಂದಿ ಸಾವನ್ನಪ್ಪಿದ್ದಾರೆ.

ನೆರೆಯಿಂದ ತೀವ್ರ ಪೀಡಿತ ಜಿಲ್ಲೆಗಳಲ್ಲಿ ಕಚಾರ್, ಕಾಮರೂಪ್, ಹೈಲಕಂಡಿ, ಹೊಜಾಯಿ, ಧುಬ್ರಿ, ನಾಗಾಂವ್, ಮೊರಿಗಾಂವ್, ಗೋಲಪಾರ, ಬರ್ಪೇಟಾ, ದಿಬ್ರುಗಡ, ನಲ್ಬರಿ, ಧೇಮಾಜಿ, ಬೊಂಗೈಗಾಂವ್, ಲಖಿಂಪುರ, ಜೊರ್ಹಾತ್, ಸೊಂತಿಪುರ, ಕೊಕ್ರಝಾರ್, ಕರೀಂಗಂಜ್, ದಕ್ಷಿಣ ಸಲ್ಮಾರ, ದರ್ರಾಂಗ್ ಹಾಗೂ ತೀನ್ಸುಕಿಯಾ ಒಳಗೊಂಡಿವೆ.

ಈ ವರ್ಷ ನೆರೆ, ಭೂಕುಸಿತ ಹಾಗೂ ಚಂಡ ಮಾರುತದಿಂದ ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ)ದ ಪ್ರಕಟಣೆ ತಿಳಿಸಿದೆ.

ನೆರೆಯಿಂದ ತೀವ್ರ ಪೀಡಿತ ಜಿಲ್ಲೆಗಳಾದ ದುಬ್ರಿಯಲ್ಲಿ 7,75,721, ದರ್ರಾಂಗ್ನಲ್ಲಿ 1,86,108, ಕಚಾರ್ನಲ್ಲಿ 1,75,231, ಬಾರ್ಪೇಟದಲ್ಲಿ 1,39,399 ಹಾಗೂ ಮೊರಿಗಾಂವ್ನಲ್ಲಿ 1,46,045 ಜನಸಂಖ್ಯೆ ಇದೆ.

ನೆರೆ ಪೀಡಿತ ಒಟ್ಟು 47,103 ಜನರಿಗೆ 612 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಇಲ್ಲದ 4,18,614 ಜನರಿಗೆ ಪರಿಹಾರ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತೀವ್ರ ನೆರೆ ಪೀಡಿತ ದಿಬ್ರುಗಡ ಜಿಲ್ಲೆಯಿಂದ ಹಿಂದಿರುಗಿದ ಹಾಗೂ ರಾಜ್ಯದ ನೆರೆ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ತಡ ರಾತ್ರಿ ಸಭೆ ನಡೆಸಿದ್ದಾರೆ.

‘‘ದಿಬ್ರುಗಢದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ನಾವು ಅಸ್ಸಾಂ ಆರೋಗ್ಯ ನಿಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ’’ ಎಂದು ಹಿಮಾಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

‘‘ಜನರ ಸಂಕಷ್ಟವನ್ನು ಆಲಿಸಲು ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸಲು ನಾವು ದಣಿವರಿಯದೆ ದುಡಿಯುತ್ತಿದ್ದೇವೆ’’ ಎಂದು ಶರ್ಮಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News