ಬಿಹಾರದಲ್ಲಿ ಒಂದೇ ದಿನ ಮೂರು ಸೇತುವೆಗಳ ಕುಸಿತ, 15 ದಿನಗಳಲ್ಲಿ 9ನೇ ಘಟನೆ
ಛಾಪ್ರಾ/ಪಾಟ್ನಾ: ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಬುಧವಾರ ಎರಡು ಸೇತುವೆ ಹಾಗೂ ಸರಣ್ ಜಿಲ್ಲೆಯಲ್ಲಿ ಒಂದು ಸೇತುವೆ ಕುಸಿದು ಬೀಳುವ ಮೂಲಕ ಒಟ್ಟು ಮೂರು ಸೇತುವೆಗಳು ಒಂದೇ ದಿನ ಕುಸಿದು ಬಿದ್ದಿವೆ. ಇದರಿಂದ ಕಳೆದ ಹದಿನೈದು ದಿನಗಳಲ್ಲಿ ಬಿಹಾರದಲ್ಲಿ ಕುಸಿದು ಬಿದ್ದಿರುವ ಸೇತುವೆಗಳ ಒಟ್ಟು ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಸೇತುವೆಗಳ ಕುಸಿತದ ಹಿಂದಿನ ಕಾರಣಗಳನ್ನು ತನಿಖೆ ಮಾಡಲು ಮುಖ್ಯ ಎಂಜಿನಿಯರ್ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗುವುದು ಎಂದು ಬಿಹಾರ ಗ್ರಾಮೀಣಾಭಿವೃದ್ಧಿ ಸಚಿವ ಅಶೋಕ್ ಚೌಧರಿ ಪ್ರಕಟಿಸಿದ ಮರು ದಿನವೇ ಈ ಘಟನೆಗಳು ನಡೆದಿವೆ.
ಬುಧವಾರ ಸಿವಾನ್ ಜಿಲ್ಲೆಯಲ್ಲಿ ಕುಸಿದಿರುವ ಎರಡೂ ಸೇತುವೆಗಳು ಮಹಾರಾಜ್‌ಗಂಜ್ ವಲಯದ ಗಂಡಕಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಗಳಾಗಿವೆ. ಈ ಪೈಕಿ ಒಂದು ಸೇತುವೆಯನ್ನು 1982-83ರಲ್ಲಿ ನಿರ್ಮಿಸಲಾಗಿದ್ದರೆ, ಮತ್ತೊಂದು ಸೇತುವೆಯನ್ನು 1998ರಲ್ಲಿ ನಿರ್ಮಿಸಲಾಗಿತ್ತು.
ಇನ್ನು ಸರಣ್ ಜಿಲ್ಲೆಯಲ್ಲಿ ಕುಸಿದಿರುವ ಸೇತುವೆಯು ಹಳೆಯ ಸೇತುವೆಗೆಳು. ಈ ಮೂರೂ ಸೇತುವೆಗಳು ಕುಸಿದು ಬಿದ್ದಾಗ, ಅವುಗಳ ಮೇಲೆ ಯಾವುದೇ ವಾಹನಗಳು ಸಂಚರಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.
ಸೇತುವೆ ಕುಸಿತ ಘಟನೆಗಳ ಕುರಿತು ಬುಧವಾರದಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಸೇತುವೆಗಳ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
"ಎಲ್ಲ ಹಳೆಯ ಸೇತುವೆಗಳ ಬಗ್ಗೆ ಮಾಹಿತಿ ಕಲೆ ಹಾಕಿರಿ. ಸ್ಥಳ ಪರಿಶೀಲನೆ ನಡೆಸಿರಿ ಹಾಗೂ ಅವುಗಳ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಿರಿ" ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.