ಕೇಂದ್ರ ಸರಕಾರದ 'ಭಾರತ್ ಅಕ್ಕಿ' ಯೋಜನೆ ಕೇವಲ ನಾಲ್ಕೇ ತಿಂಗಳಲ್ಲಿ ಸ್ಥಗಿತಗೊಳ್ಳಲು ಕಾರಣವೇನು?
ಬೆಂಗಳೂರು: ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ 'ಭಾರತ್ ಅಕ್ಕಿ' ಯೋಜನೆ ಕೇವಲ ನಾಲ್ಕೇ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. 'ಭಾರತ್ ಅಕ್ಕಿ' ಯೋಜನೆ ಬಿಜೆಪಿಗೆ ಕೇವಲ ಮತ ಪಡೆಯುವ ತಂತ್ರವಾಗಿತ್ತೇ? ಚುನಾವಣೆ ಮುಗಿದ ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸಲಾಯಿತೇ ? ಎಂಬ ಪ್ರಶ್ನೆಗಳು ಈಗ ಎದ್ದಿವೆ.
ಕೈಗೆಟಕುವ ದರದಲ್ಲಿ ಗುಣಮಟ್ಟದ ಆಹಾರವನ್ನು ವಿತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಾರಂಭಿಸಿದ್ದ ಮಹತ್ವಾಕಾಂಕ್ಷೆಯ 'ಭಾರತ್ ಅಕ್ಕಿ' ಯೋಜನೆಯನ್ನು ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಯೋಜನೆಯಡಿ ಅಕ್ಕಿಯನ್ನು ಕೆ.ಜಿ.ಗೆ ರೂ. 29, ಗೋಧಿ ಹಿಟ್ಟು ಕೆ.ಜಿ.ಗೆ ರೂ. 27.50 ಮತ್ತು ಬೇಳೆಕಾಳುಗಳನ್ನು ಕೆ.ಜಿ.ಗೆ ರೂ. 60 ರಂತೆ ಮಾರಾಟ ಮಾಡಲಾಗುತ್ತಿತ್ತು.
ಲೋಕಸಭಾ ಚುನಾವಣೆಗೆ ಮುನ್ನ ಫೆಬ್ರವರಿ 2, 2024 ರಂದು ಪ್ರಾರಂಭವಾದ 'ಭಾರತ್ ಅಕ್ಕಿ' ಯೋಜನೆಯು ಸಾಮಾನ್ಯ ಜನರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರವನ್ನು ಒದಗಿಸಲು ಶುರು ಮಾಡಿರುವ ಯೋಜನೆ ಎಂದು ಹೇಳಲಾಗಿತ್ತು. ಅದಕ್ಕೆ ಭರ್ಜರಿ ಪ್ರಚಾರವನ್ನೂ ಕೊಡಲಾಗಿತ್ತು. ಚುನಾವಣೆಯಲ್ಲಿ ಮೋದಿ ಹಾಗು ಬಿಜೆಪಿಗೆ ಇದರಿಂದ ದೊಡ್ಡ ಲಾಭವಾಗಲಿದೆ ಎಂಬ ವಿಶ್ಲೇಷಣೆಗಳೂ ಕೇಳಿ ಬಂದಿದ್ದವು.
ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (NAFED) ಮೇಲ್ವಿಚಾರಣೆಯ ಈ ಯೋಜನೆಯು ಗ್ರಾಹಕರಿಂದ ಭಾರೀ ಬೇಡಿಕೆ ಕಂಡಿತ್ತು. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (NAFED), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (NCCF) ಹಾಗೂ ಕೇಂದ್ರೀಯ ಭಂಡಾರಗಳು ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಅಕ್ಕಿ ಮಾರಾಟವಾಗುತ್ತಿತ್ತು.
ಈ ಯೋಜನೆಯ ಅಡಿ 29 ರೂ.ಗೆ 1 ಕೆಜಿ ಅಕ್ಕಿ, 27.50 ರೂ.ಗೆ 1 ಕೆಜಿ ಗೋಧಿ ಹಿಟ್ಟು, 60 ರೂ.ಗೆ 1 ಕೆಜಿ ಕಡಲೆ ಬೆಳೆ ಮಾರಾಟ ಮಾಡಲಾಗುತ್ತಿತ್ತು. ಜನ ಸಂದಣಿ ಹೆಚ್ಚಿನ ಜಾಗಗಳಲ್ಲಿ ಮೊಬೈಲ್ ವ್ಯಾನ್ ಮೂಲಕ ಅಕ್ಕಿ, ಬೇಳೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಜೂನ್ 10 ರವರೆಗೆ ಕೇಂದ್ರ ಸರ್ಕಾರ ಆದೇಶದ ಅನ್ವಯ ದಾಸ್ತಾನುಗಳು ಮಾರಾಟವಾದ ನಂತರ ಪೂರೈಕೆಯನ್ನು ಸ್ಥಗಿತ ಗೊಳಿಸಲಾಗಿದೆ.
ಇದೀಗ ನಾಫೆಡ್ ವೆಬ್‌ಸೈಟ್ ನಲ್ಲಿ ಅಕ್ಕಿ ಸ್ಟಾಕ್ ಇಲ್ಲ ಎಂದು ತೋರಿಸುತ್ತಿದೆ.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ಪ್ರತಿ ವ್ಯಕ್ತಿಗೆ ಐದು ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಎಪಿಎಲ್ ಪಡಿತರ ಚೀಟಿ ಇರುವವರಿಗೆ ಕೆ.ಜಿ.ಗೆ 15 ರೂ.ನಂತೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ.
ಆದರೆ, ಈ ಎರಡೂ ಬಗೆಯ ಪಡಿತರ ಚೀಟಿಯಿಲ್ಲದ ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲಿವೆ. ಅದರಲ್ಲೂ ಬಡತನ, ಬೆಲೆ ಏರಿಕೆಯಿಂದ ಬಳಲುತ್ತಿರುವವರ ಸಂಖ್ಯೆ ಸಾಕಷ್ಟಿದೆ. ನಾನಾ ಕಾರಣಗಳಿಂದ ವಲಸೆ ಬಂದವರು, ಕೂಲಿ ಕಾರ್ಮಿಕರು, ಪಡಿತರ ಚೀಟಿ ಇಲ್ಲದವರು 29 ರೂ.ಗೆ ಗುಣಮಟ್ಟದ ಅಕ್ಕಿ ಸಿಗುತ್ತದೆ ಎಂದು ಖುಷಿಪಟ್ಟಿದ್ದರು. ಆದರೆ, ಅದೀಗ ಸ್ಥಗಿತಗೊಂಡಿದೆ.
ಭಾರತ್ ಅಕ್ಕಿ ಕೇವಲ ಒಂದು ಚುನಾವಣಾ ಗಿಮಿಕ್ ಆಗಿತ್ತೇ ಎಂಬ ಪ್ರಶ್ನೆಯು ಜನರಲ್ಲಿ ಉದ್ಭವಿಸಿದೆ. ಈ ಯೋಜನೆ ಚುನಾವಣಾ ಮಾದರಿ ನೀತಿ ಸಂಹಿತೆಯಾ ಉಲ್ಲಂಘನೆ ಎಂದು ಕೆಲವು ರಾಜಕೀಯ ಪಕ್ಷಗಳು ಆರೋಪ ಹೊರಿಸಿದ್ದರು.
ಹೆಚ್ಚಿನ ಬೇಡಿಕೆಯಿದ್ದರೂ ಸರಬರಾಜು ಮುಗಿದಿದೆ ಮತ್ತು ಜುಲೈ 1 ರಿಂದ ಯಾವುದೇ ದಿನಸಿಗಳನ್ನು ವಿತರಿಸಲಾಗಿಲ್ಲ ಎಂದು NAFED ಕರ್ನಾಟಕ ವಿಭಾಗದ ಮುಖ್ಯಸ್ಥ ವಿನಯ್‌ಕುಮಾರ್ ತಿಳಿಸಿದ್ದು ವರದಿಯಾಗಿದೆ.
ಕಳೆದ ವರ್ಷ ಸಾಕಷ್ಟು ಮಳೆಯಾಗದ ಕಾರಣ ಭತ್ತದ ಉತ್ಪಾದನೆಯು ಕುಂಠಿತಗೊಂಡಿದ್ದು ಯೋಜನೆ ಸ್ಥಗಿತಗೊಳ್ಳಲು ಪ್ರಾಥಮಿಕ ಕಾರಣವೆಂದು ಹೇಳಲಾಗುತ್ತಿದೆ. ಇದರ ಜೊತೆಗೆ ಸರ್ಕಾರಕ್ಕೆ ಆರ್ಥಿಕ ಹೊರೆಯೂ ಹೆಚ್ಚಾದದ್ದು ತಾತ್ಕಾಲಿಕ ಸ್ಥಗಿತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ದೇಶಾದ್ಯಂತ ಯೋಜನೆಯನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಈಗ ತಾತ್ಕಾಲಿಕ ಸ್ಥಗಿತವೆಂದು ಹೇಳುತ್ತಿದ್ದರೂ ಈ ಯೋಜನೆ ಶಾಶ್ವತವಾಗಿಯೇ ಸ್ಥಗಿತಗೊಳ್ಳಲಿದೆ ಎಂದೂ ಹೇಳಲಾಗುತ್ತಿದೆ.
ಭಾರತ್ ಅಕ್ಕಿ ವಿತರಣೆ ಸಂಬಂಧ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರಲು ಚಿಂತನೆ ಮಾಡಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ತಾತ್ಕಾಲಿಕವಾಗಿ ಭಾರತ್ ರೈಸ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳೂ ಕೇಳಿ ಬಂದಿದೆ.