ರಾಜಸ್ಥಾನ ಸಚಿವ ಕಿರೋಡಿ ಲಾಲ್ ಮೀನಾ ರಾಜೀನಾಮೆ

Update: 2024-07-04 07:21 GMT

ಕಿರೋಡಿ ಲಾಲ್ ಮೀನಾ |  PTI

ಜೈಪುರ: ತಮ್ಮ ಹೊಣೆಗಾರಿಕೆ ಹೊಂದಿರುವ ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರದಲ್ಲಿ ಪಕ್ಷ ಪರಾಭವಗೊಂಡರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಚುನಾವಣಾ ಪ್ರಚಾರದ ಸಮಯದಲ್ಲಿ ಘೋಷಣೆ ಮಾಡಿದ್ದ ರಾಜಸ್ಥಾನ ಸಚಿವ ಕಿರೋಡಿ ಲಾಲ್ ಮೀನಾ, ತಾವು ಕೊಟ್ಟ ಮಾತಿನಂತೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ತಮ್ಮ ತವರಾದ ದೌಸಾ ಸೇರಿದಂತೆ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭವಗೊಂಡಿದ್ದರಿಂದ, ತಾವು ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ್ದ ಭರವಸೆಯಂತೆ ತಮ್ಮ ಸಚಿವ ಸ್ಥಾನಕ್ಕೆ 72 ವರ್ಷದ ಕಿರೋಡಿ ಲಾಲ್ ಮೀನಾ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರ ಆಪ್ತರೊಬ್ಬರು, "ಕಿರೋಡಿ ಲಾಲ್ ಮೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು 10 ದಿನಗಳ ಹಿಂದೆ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದಾರೆ" ಎಂದು ತಿಳಿಸಿದ್ದಾರೆ.

ರಾಜಸ್ಥಾನದ 25 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ಕೇವಲ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಸುಧಾರಿತ ಪ್ರದರ್ಶನ ತೋರಿದ್ದ ಕಾಂಗ್ರೆಸ್, ದೌಸಾ ಲೋಕಸಭಾ ಕ್ಷೇತ್ರ ಸೇರಿದಂತೆ ಒಟ್ಟು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಉಳಿದ ಪಕ್ಷಗಳು ಮೂರು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News