ಹಿಂಸಾಚಾರ, ದ್ವೇಷ ಹರಡುವ ಬಿಜೆಪಿಗೆ ಹಿಂದೂ ಧರ್ಮದ ಮೂಲತತ್ವ ಅರ್ಥ ಆಗುತ್ತಿಲ್ಲ: ರಾಹುಲ್ ಗಾಂಧಿ

Update: 2024-07-03 17:05 GMT

ರಾಹುಲ್ ಗಾಂಧಿ |  PC : PTI 

ಹೊಸದಿಲ್ಲಿ: ಹಿಂಸಾಚಾರ ಹಾಗೂ ದ್ವೇಷ ಹರಡುವ ಬಿಜೆಪಿಯವರಿಗೆ ಹಿಂದೂ ಧರ್ಮದ ಮೂಲತತ್ವ ಅರ್ಥ ಆಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಳಿತ ಪಕ್ಷವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ನೀಡಿದ ಹೇಳಿಕೆ ವಿರುದ್ಧ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭ ಅಹ್ಮದಾಬಾದ್‌ನಲ್ಲಿರುವ ಗುಜರಾತ್ ಕಾಂಗ್ರೆಸ್‌ನ ಕೇಂದ್ರ ಕಚೇರಿಯ ಹೊರಗೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರು.

‘ಎಕ್ಸ್’ನಲ್ಲಿ ಹಿಂದಿಯಲ್ಲಿ ಮಾಡಿದ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ, ‘‘ಗುಜರಾತ್‌ನ ಕಾಂಗ್ರೆಸ್ ಕಚೇರಿ ಮೇಲಿನ ಹೇಡಿತನದ ಹಾಗೂ ಹಿಂಸಾತ್ಮಕ ದಾಳಿಯು ಬಿಜೆಪಿ ಹಾಗೂ ಸಂಘ ಪರಿವಾರದ ಕುರಿತ ನನ್ನ ನಿಲುವನ್ನು ಇನ್ನಷ್ಟು ಗಟ್ಟಿಗೊಳಿಸಿದೆ’’ ಎಂದರು.

‘‘ಗುಜರಾತ್‌ನ ಜನರು ಬಿಜೆಪಿಯ ಸುಳ್ಳುಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾರೆ ಹಾಗೂ ಬಿಜೆಪಿ ಸರಕಾರಕ್ಕೆ ನಿರ್ಣಾಯಕ ಪಾಠ ಕಲಿಸುತ್ತಾರೆ. ನಾನು ಇದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ, ಗುಜರಾತ್‌ನಲ್ಲಿ ಇಂಡಿಯಾ ಜಯ ಗಳಿಸಲಿದೆ’’ ಎಂದು ರಾಹುಲ್ ಗಾಂಧಿ ಹೇಳಿದರು.

ಪಾಲ್ಡಿ ಪ್ರದೇಶದಲ್ಲಿ ಹಿಂಸಾತ್ಮಕ ಘರ್ಷಣೆ ಹಾಗೂ ಕಲ್ಲು ತೂರಾಟದ ಬಳಿಕ ಎರಡೂ ಪಕ್ಷಗಳ ಹಲವು ಕಾರ್ಯಕರ್ತರು ಹಾಗೂ ನಾಯಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ನಗರ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿ ತಿಳಿಸಿದ್ದಾರೆ.

ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದರು ಎಂದು ಬಿಜೆಪಿ ಆರೋಪಿಸಿದರೆ, ಬಿಜೆಪಿ ಕಾರ್ಯಕರ್ತರು ಹಿಂಸಾಚಾರ ಆರಂಭಿಸಿದರು ಎಂದು ಪ್ರತಿಪಕ್ಷದ ನಾಯಕರು ಹೇಳಿದ್ದಾರೆ.

ಘಟನೆಯಲ್ಲಿ ತಮ್ಮ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಎರಡೂ ಪಕ್ಷಗಳು ಪ್ರತಿಪಾದಿಸಿವೆ. ಅಲ್ಲದೆ, ಪೊಲೀಸ್ ದೂರನ್ನು ಕೂಡ ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News