ಪ್ರಶ್ನೆಪತ್ರಿಕೆ ಸೋರಿಕೆ: ಪ್ರಾಂಶುಪಾಲೆಯನ್ನು ಕುರ್ಚಿ ಸಮೇತ ಎಳೆದೊಯ್ದ ಶಾಲೆಯ ಆಡಳಿತ, ಸಿಬ್ಬಂದಿ!

Update: 2024-07-06 11:26 GMT

Screengrab Photo: X/ @ndtv

ಪ್ರಯಾಗ್ ರಾಜ್: ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ಚುರುಕುಗೊಂಡಿರುವ ಬೆನ್ನಿಗೇ, ಶಾಲೆಯೊಂದರ ಪ್ರಾಂಶುಪಾಲೆಯನ್ನು ಶಾಲೆಯ ಅಧ್ಯಕ್ಷ ಹಾಗೂ ಶಾಲಾ ಸಿಬ್ಬಂದಿಗಳ ಗುಂಪೊಂದು ಅವರ ಕುರ್ಚಿಯಿಂದ ಬಲವಂತವಾಗಿ ತೆರವುಗೊಳಿಸಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಪ್ರತಿರೋಧ ತೋರಿದ ಪ್ರಾಂಶುಪಾಲೆಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡಿರುವ ಗುಂಪು, ಆಕೆಯ ಕುರ್ಚಿಯಲ್ಲಿ ಮತ್ತೊಬ್ಬ ಪ್ರಾಂಶುಪಾಲರನ್ನು ಕುಳ್ಳರಿಸಿ, ಆಕೆಗೆ ಶುಭ ಕೋರುತ್ತಿರುವುದು ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.

ಈ ಘಟನೆಯು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯಲ್ಲಿ ನಡೆದಿದ್ದು, ಈ 2 ನಿಮಿಷ, 20 ಸೆಕೆಂಡ್ ಗಳ ದೃಶ್ಯಾವಳಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಿಗೇ ಈ ಘಟನೆಯ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯ ಹೆಸರೂ ಕೇಳಿ ಬಂದಿದೆ ಎಂದು ಡಿಯೋಸೀಸ್ ಲಕ್ನೊವನ್ನು ಪ್ರತಿನಿಧಿಸುವ ಬಿಷಪ್ ಮೌರೀಸ್ ಎಡ್ಗರ್ ಡ್ಯಾನ್ ತಿಳಿಸಿದ್ದಾರೆ. ಈ ಶಾಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಯುಪಿಪಿಎಸ್ಸಿ ಸಹಾಯಕ ಪರಾಮರ್ಶೆ ಅಧಿಕಾರಿಗಳ 11 ಹುದ್ದೆಗಾಗಿನ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂದು ಹೇಳಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಈ ಶಾಲೆಯ ಸಿಬ್ಬಂದಿಯಾದ ವಿನೀತ್ ಜಸ್ವಂತ್ ಅವರನ್ನು ವಿಶೇಷ ಕಾರ್ಯಪಡೆ ಬಂಧಿಸಿದೆ ಎಂದು ಬಿಷಪ್ ಡ್ಯಾನ್ ತಿಳಿಸಿದ್ದಾರೆ.

ಈ ಹಗರಣದಲ್ಲಿ ಪ್ರಾಂಶುಪಾಲೆ ಪಾರುಲ್ ಸೊಲೊಮನ್ ಶಾಮೀಲಾಗಿದ್ದಾರೆಂದು ತಿಳಿದು ಬಂದಿದ್ದು, ಇದರಿಂದಾಗಿಯೇ ಅವರನ್ನು ಹುದ್ದೆಯಿಂದ ತೆರವುಗೊಳಿಸಬೇಕಾದ ನೇರ ಪರಿಸ್ಥಿತಿ ಉದ್ಭವಿಸಿತು ಎಂದು ಬಿಷಪ್ ಡ್ಯಾನ್ ಸಮಜಾಯಿಷಿ ನೀಡಿದ್ದಾರೆ.

ಬಿಷಪ್ ಡ್ಯಾನ್ ಪ್ರಕಾರ, ಸೊಲೊಮನ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ನಂತರ ಶಿರ್ಲೆ ಮ್ಯಾಸಿ ಅವರನ್ನು ನೂತನ ಪ್ರಾಂಶುಪಾಲೆಯನ್ನಾಗಿ ನೇಮಿಸಲಾಗಿತ್ತು. ಆದರೆ, ಹುದ್ದೆಯನ್ನು ಸ್ವೀಕರಿಸಲು ಮ್ಯಾಸಿ ಆಗಮಿಸಿದಾಗ, ಸೊಲೊಮನ್ ತಮ್ಮ ಪ್ರಾಂಶುಪಾಲ ಕಚೇರಿಗೆ ಬೀಗ ಹಾಕಿಕೊಂಡರು. ನಂತರ ಬಾಗಿಲನ್ನು ಬಲವಂತವಾಗಿ ತೆರೆಸಿ, ಕೆಲವು ಶಿಕ್ಷಕರು ಸೊಲೊಮನ್ ಅವರನ್ನು ಅವರ ಕುರ್ಚಿಯಿಂದ ತೆರವುಗೊಳಿಸಿದರು. ಈ ಸಂಬಂಧ ಸೊಲೊಮನ್ ಕಾಲೇಜು ಸಿಬ್ಬಂದಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.

ಫೆಬ್ರವರಿ 11ರಂದು ಪ್ರಯಾಗ್ ರಾಜ್ ನಲ್ಲಿ ಪರೀಕ್ಷೆ ಪ್ರಾರಂಭವಾಗುವುದಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಬಿಷಪ್ ಜಾನ್ಸನ್ ಬಾಲಕಿಯರ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿಯಾಗಿದ್ದ ವಿನೀತ್ ಯಶ್ವಂತ್ ಸೇರಿದಂತೆ ಒಟ್ಟು 10 ಮಂದಿಯನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯು ಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News