ಹರ್ಯಾಣ ಮತದಾನ ಆರಂಭ: ಹ್ಯಾಟ್ರಿಕ್ ಮೇಲೆ ಬಿಜೆಪಿ ಕಣ್ಣು, ಗದ್ದುಗೆಗೆ ಕಾಂಗ್ರೆಸ್ ಹರಸಾಹಸ
ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆ ಎರಡು ರಾಜಕೀಯ ಪಕ್ಷಗಳಿಗೆ ನಿರ್ಣಾಯಕವಾಗಿದ್ದು, ಹ್ಯಾಟ್ರಿಕ್ ಕನಸಿನಲ್ಲಿರುವ ಬಿಜೆಪಿ ಹಾಗೂ ಹತ್ತು ವರ್ಷದ ಬಳಿಕ ಮತ್ತೆ ಗದ್ದುಗೆ ಹಿಡಿಯುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿದೆ. 8821 ಮಂದಿ ಶತಾಯುಷಿಗಳು ಸೇರಿದಂತೆ ರಾಜ್ಯದ 2 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮುಂಜಾನೆ 7 ಗಂಟೆಗೆ ರಾಜ್ಯದ 20269 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ಹುಮ್ಮಸ್ಸಿನಲ್ಲಿದ್ದರೆ, ಕಾಂಗ್ರೆಸ್ ಪಕ್ಷ 10 ವರ್ಷದ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಯಾವುದೇ ಪಕ್ಷ ತಮ್ಮ ಬೆಂಬಲವಿಲ್ಲದೇ ಅಧಿಕಾರ ನಡೆಸುವುದು ಅಸಾಧ್ಯ ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ. ತೃತೀಯ ರಂಗದಲ್ಲಿ ದುಷ್ಯಂತ್ ಚೌಟಾಲಾ ನೇತೃತ್ವದ ಜನನಾಯಕ ಜನತಾ ಪಕ್ಷ, ಚಂದ್ರಶೇಖರ ರವಣ್ ಅವರ ಆಜಾದ್ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದೆ. ಜೆಜೆಪಿ ಈ ಮೊದಲು ಬಿಜೆಪಿಯ ಮಿತ್ರಪಕ್ಷವಾಗಿತ್ತು. ಜೆಜೆಪಿ 70 ಹಾಗೂ ಎಎಸ್ಪಿ 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.
ಮಾಜಿ ಸಿಎಂ ಓಂಪ್ರಕಾಶ್ ಚೌಟಾಲಾ ನೇತೃತ್ವದ ಐಎನ್ಎಲ್ ಡಿ ಹಾಗೂ ಮಿತ್ರಪಕ್ಷವಾದ ಬಿಎಸ್ಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿವೆ. ಈ ಬಾರಿಯ ಚುನಾವಣೆಯಲ್ಲಿ 1031 ಮಂದಿ ಕಣದಲ್ಲಿದ್ದು, 2014ರಲ್ಲಿ ಸ್ಪರ್ಧಿಸಿದ 1351 ಹಾಗೂ 2019ರಲ್ಲಿ ಸ್ಪರ್ಧಿಸಿದ್ದ 1169 ಅಭ್ಯರ್ಥಿಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಮಂದಿ ಕಣದಲ್ಲಿದ್ದಾರೆ. ಇಂದು ಸಂಜೆ ಮತಗಟ್ಟೆ ಸಮೀಕ್ಷೆಗಳು ಹೊರಬೀಳಲಿದ್ದು, ಬೆಳವಣಿಗೆಯನ್ನು ಇಡೀ ದೇಶ ಕಾತರದಿಂದ ಕಾಯುತ್ತಿದೆ.
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಭೂಪೀಂದರ್ ಸಿಂಗ್ ಮತ್ತು ವಿಜೇಶ್ ಫೋಗಟ್, ದುಷ್ಯಂತ್ ಚೌಟಾಲಾ ಕ್ರಮವಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಜೆಪಿಯಿಂದ ಕಣದಲ್ಲಿರುವ ಪ್ರಮುಖರು. ಪಕ್ಷೇತರ ಅಭ್ಯರ್ಥಿಗಳಾದ ಸಾವಿತ್ರಿ ಜಿಂದಾಲ್ ಮತ್ತು ಚಿತ್ರ ಸ್ವರ್ಣ ಕೂಡಾ ಗಮನ ಸೆಳೆದಿದ್ದಾರೆ.