ರಕ್ಷಣಾ ವಲಯದಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಪ್ರತಿಪಾದಿಸಿದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್

Update: 2024-10-04 15:42 GMT

ರಾಜ್ ನಾಥ್ ಸಿಂಗ್ | PC : PTI 

ಹೊಸದಿಲ್ಲಿ: ದೇಶದ ಒಟ್ಟಾರೆ ರಕ್ಷಣಾ ಉತ್ಪಾದನೆ ಪೈಕಿ ಶೇ. 50ರಷ್ಟು ಖಾಸಗಿ ಸಹಭಾಗಿತ್ವದಿಂದಲೇ ಬರಬೇಕು ಎಂದು ಶುಕ್ರವಾರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.

ಸೊಸೈಟಿ ಆಫ್ ಇಂಡಿಯನ್ ಡಿಫೆನ್ಸ್ ಮ್ಯಾನ್ಯುಫ್ಯಾಕ್ಚರರ್ಸ್ ಆಯೋಜಿಸಿದ್ದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ರಾಜ್ ನಾಥ್ ಸಿಂಗ್, ಉಕ್ರೇನ್-ರಶ್ಯ ಯುದ್ಧವು ರಕ್ಷಣಾ ಉದ್ಯಮಗಳ ಪ್ರಾಮುಖ್ಯತೆ ಕುಗ್ಗಿಲ್ಲ; ಬದಲಿಗೆ ಅದರ ವಿಸ್ತರಣೆಯ ಅಗತ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

ಈ ಮುನ್ನ ಭಾರತವು ರಕ್ಷಣಾ ವಲಯದಲ್ಲಿ ಆಮದು ಅವಲಂಬಿತ ದೇಶವಾಗಿತ್ತು. ಆದರೆ ಈಗ ದೇಶವು ರಕ್ಷಣಾ ರಫ್ತಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸತೊಡಗಿದೆ ಎಂದು ಅವರು ಒತ್ತಿ ಹೇಳಿದರು. ರಫ್ತು ಮತ್ತು ಆಮದು ಅಂಕಿ-ಅಂಶಗಳತ್ತ ಸದಾ ಗಮನ ನೆಟ್ಟಿರುವಂತೆ ರಕ್ಷಣಾ ವಲಯದ ಉದ್ಯಮಿಗಳಿಗೆ ಕರೆ ನೀಡಿದ ರಾಜ್ ನಾಥ್ ಸಿಂಗ್, ಗುರಿ ಆಧಾರಿತ ಧೋರಣೆಯನ್ನು ಅಳವಡಿಸಿಕೊಂಡರೆ, ರಫ್ತು ಮತ್ತು ಆಮದು ನಡುವಿನ ವ್ಯತ್ಯಾಸವನ್ನು ತಗ್ಗಿಸಬಹುದಾಗಿದೆ ಎಂದು ಕಿವಿಮಾತು ಹೇಳಿದರು.

“ದೇಶದ ಒಟ್ಟಾರೆ ರಕ್ಷಣಾ ಸಾಮಗ್ರಿ ಉತ್ಪಾದನೆಯ ಪೈಕಿ ಶೇ. 50ರಷ್ಟನ್ನು ಖಾಸಗಿ ಉದ್ಯಮಗಳು ತಯಾರಿಸುವುದನ್ನು ನಾನು ನೋಡಲು ಬಯಸುತ್ತೇನೆ. ಇದು ನಮ್ಮ ಗುರಿಯಾಗಿರಬೇಕು. ಸರಕಾರವು ಇದನ್ನು ಸಾಧಿಸುವ ಪ್ರಯತ್ನಗಳಿಗೆ ಬೆಂಗಾವಲಾಗಿ ನಿಲ್ಲಲಿದೆ” ಎಂದು ಅವರು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News