ಬಸ್ತರ್: ಗುಂಡಿನ ಚಕಮಕಿಯಲ್ಲಿ 30 ನಕ್ಸಲರ ಹತ್ಯೆ

Update: 2024-10-05 04:16 GMT

Photo:ANI

ರಾಂಚಿ: ಬಸ್ತರ್ ಅಭುಜ್ ಮರ್ ಕಾಡಿನ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶುಕ್ರವಾರ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ 28-30 ಮಂದಿ ನಕ್ಸಲರು ಹತ್ಯೆಗೀಡಾಗಿದ್ದಾರೆ. ಇದರಲ್ಲಿ ಐದು ಮಂದಿ ಹಿರಿಯ ಕಮಾಂಡರ್ ಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಬಸ್ತರ್ ನಲ್ಲಿ ನಕ್ಸಲೀಯರ ಮೇಲೆ ನಡೆಸಿದ ಅತಿದೊಡ್ಡ ಪ್ರಹಾರ ಎನಿಸಿದ್ದು, ಏಪ್ರಿಲ್ 16ರಂದು ನಡೆದ ಗುಂಡಿನ ಕಾಳಗದಲ್ಲಿ 29 ಮಂದಿಯನ್ನು ಹತ್ಯೆ ಮಾಡಿದ್ದಕ್ಕಿಂತಲೂ ದೊಡ್ಡ ಕಾಳಗ ಇದಾಗಿದೆ.

ಛತ್ತೀಸ್ಗಢ ಸಿಎಂ ವಿಷ್ಣುದೇವ್ ಸಾಯಿ ಮತ್ತು ನಾರಾಯಣಪುರ ಎಸ್ಪಿ ಪ್ರಭಾತ್ ಸಿಂಗ್ ಅವರು ಸಾವಿನ ಸಂಖ್ಯೆ 28 ಎಂದು ಹೇಳಿದ್ದಾರೆ. ಆದರೆ ದಾಂತೇವಾಡ ಎಸ್ಪಿ ಗೌರವ್ ರಾಯ್ ಪ್ರಕಾರ 30 ಮಂದಿ ನಕ್ಸಲೀಯರು ಹತ್ಯೆಗೀಡಾಗಿದ್ದಾರೆ.

"ಕತ್ತಲು ಆಗಿರುವುದರಿಂದ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಜಾಗರೂಕವಾಗಿ ಸ್ವಚ್ಛಗೊಳಿಸುತ್ತಿದ್ದಾರೆ. ನಕ್ಸಲರ ಮೃತದೇಹಗಳನ್ನು ಸಂಗ್ರಹಿಸಲು ಕೆಲ ಕಾಲ ಹಿಡಿಯಬಹುದು. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ" ಎಂದು ರಾಯ್ ವಿವರಿಸಿದ್ದಾರೆ. ಇಲ್ಲಿ ಕನಿಷ್ಠ 50 ಮಂದಿ ನಕ್ಸಲರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆದಿತ್ತು.

ಸುಮಾರು 10 ಕಿಲೋಮೀಟರ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಗುಂಡಿನ ಚಕಮಕಿ ನಡೆದಿದೆ. ಮಧ್ಯಾಹ್ನ 1 ರಿಂದ ರಾತ್ರಿ 9ರವರೆಗೆ ನಿರಂತರ ಗುಂಡಿನ ಕಾಳಗ ನಡೆದಿದೆ. ಇದು ಅತ್ಯಂತ ಕೆಚ್ಚಿನ ಕಾರ್ಯಾಚರಣೆ ಎಂದು ನಾರಾಯಣಪುರ ಎಸ್ಪಿ ಪ್ರಭಾತ್ ಸಿಂಗ್ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News