ಮೂರನೆಯ ಅಂತಸ್ತಿನಿಂದ ಜಿಗಿದ ಮಹಾರಾಷ್ಟ್ರ ಉಪ ಸ್ಪೀಕರ್ | ರಕ್ಷಣಾ ಬಲೆಗೆ ಬಿದ್ದ ನರಹರಿ ಝಿರ್ವಾಲೆ ರಕ್ಷಣೆ

Update: 2024-10-04 16:39 GMT

PC : NDTV 

ಮುಂಬೈ: ಧನಗಾರ್ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದನ್ನು ವಿರೋಧಿಸಿ ಮುಂಬೈನಲ್ಲಿರುವ ರಾಜ್ಯ ಕಾರ್ಯಾಲಯದ ಮೂರನೆಯ ಅಂತಸ್ತಿನಿಂದ ಮಹಾರಾಷ್ಟ್ರ ಉಪ ಸ್ಪೀಕರ್ ನರಹರಿ ಝಿರ್ವಾಲೆ ಮತ್ತು ಇನ್ನೂ ಮೂವರು ಜನ ಪ್ರತಿನಿಧಿಗಳು ಕೆಳಕ್ಕೆ ಜಿಗಿದಿರುವ ನಾಟಕೀಯ ಘಟನೆ ಶುಕ್ರವಾರ ನಡೆದಿದೆ. 2018ರಲ್ಲಿ ರಾಜ್ಯ ಕಾರ್ಯಾಲಯದಲ್ಲಿ ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯಲು ಅಳವಡಿಸಲಾಗಿರುವ ರಕ್ಷಣಾ ಬಲೆಯಲ್ಲಿ ಬಿದ್ದಿದ್ದರಿಂದ ಓರ್ವ ಬಿಜೆಪಿ ಸಂಸದ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ನರಹರಿ ಝಿರ್ವಾಲ್, ಅಜಿತ್ ಪವಾರ್ ನೇತೃತ್ವದ ಎನ್ಸಿಪಿಗೆ ಸೇರಿದ್ದು, ಇನ್ನೂ ಮೂವರು ಜನಪ್ರತಿನಿಧಿಗಳು ಧನಗಾರ್ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ರಾಜ್ಯ ಕಾರ್ಯಾಲಯದ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಜಿಗಿದರು. ರಾಜ್ಯ ಸರಕಾರವು ಧನಗಾರ್ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ, ಕೆಲವು ಪರಿಶಿಷ್ಟ ಪಂಗಡದ ಶಾಸಕರು ಮುಖ್ಯಮಂತ್ರಿ ಏಕನಾಥ್ ಶಿಂದೆ, ಉಪ ಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವರು ಸಚಿವ ಸಂಪುಟ ಸಭೆಗೆ ಹಾಜರಾಗಲು ಮಂತ್ರಾಲಯ ಸಂಕೀರ್ಣಕ್ಕೆ ಆಗಮಿಸಿದಾಗ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದಲ್ಲಿ ಸದ್ಯ ಧನಗಾರ್ ಸಮುದಾಯ ಇತರೆ ಹಿಂದುಳಿದ ವರ್ಗಗಳ ಪ್ರವರ್ಗಕ್ಕೆ ಸೇರಿದ್ದು, ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎಂದು ಸೋಲಾಪುರ್ ಜಿಲ್ಲೆಯ ಪಂಢರಾಪುರದಲ್ಲಿ ಈ ಸಮುದಾಯಕ್ಕೆ ಸೇರಿದ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವಾರು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಧನಗಡ್ ಸಮುದಾಯವೇ ಧನಗಾರ್ ಸಮುದಾಯ ಎಂಬುದು ಈ ಪ್ರತಿಭಟನಾಕಾರರ ವಾದವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News