ಯುದ್ಧದ ನಡುವೆಯೂ ಪ್ರಧಾನಿ ಮೋದಿ 15,000 ಭಾರತೀಯ ಕಾರ್ಮಿಕರನ್ನು ಇಸ್ರೇಲ್ ಗೆ ಕಳಿಸುತ್ತಿದ್ದಾರೆ : ಖರ್ಗೆ ಆರೋಪ

Update: 2024-10-04 16:42 GMT

ಮಲ್ಲಿಕಾರ್ಜುನ ಖರ್ಗೆ |  ANI 

ಹೊಸದಿಲ್ಲಿ: ಪಶ್ಚಿಮ ಏಶ್ಯದಲ್ಲಿ ಯುದ್ಧ ಪರಿಸ್ಥಿತಿಯಿದ್ದರೂ, ಪ್ರಧಾನಿ ನರೇಂದ್ರ ಮೋದಿ 15,000 ಭಾರತೀಯ ಉದ್ಯೋಗಿಗಳನ್ನು ಇಸ್ರೇಲ್ ಗೆ ಕಳಿಸಿಕೊಡಲು ವ್ಯವಸ್ಥೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಕೇಂದ್ರ ಸರಕಾರದ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ ಮೂಲಕ 15,000 ಭಾರತೀಯ ಉದ್ಯೋಗಿಗಳನ್ನು ಇಸ್ರೇಲ್ ಗೆ ಕಳಿಸಿಕೊಡಲಾಗಿದೆ ಎಂದು ಆಪಾದಿಸಿದ್ದಾರೆ.

“ಪಶ್ಚಿಮ ಏಶ್ಯದಲ್ಲಿ ಯುದ್ಧ ಪರಿಸ್ಥಿತಿ ಇದ್ದರೂ, ಇಸ್ರೇಲ್ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ ಮೂಲಕ 15,000 ಭಾರತೀಯ ಉದ್ಯೋಗಿಗಳನ್ನು ಕಳಿಸಿ ಕೊಡುತ್ತಿರುವುದು ಮತ್ತಾರೂ ಅಲ್ಲ; ಪ್ರಧಾನಿ ಮೋದಿ ಸರಕಾರ” ಎಂದು ಅವರು ಬರೆದುಕೊಂಡಿದ್ದಾರೆ.

ತಪ್ಪು ಮಾಹಿತಿಯ ಮೂಲಕ ಯುವ ಭಾರತೀಯರು ರಶ್ಯ-ಉಕ್ರೇನ್ ಯುದ್ಧದಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಶುಕ್ರವಾರ ಅಂತ್ಯಗೊಂಡ ನಂತರ, ಮಲ್ಲಿಕಾರ್ಜುನ ಖರ್ಗೆ ಈ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News