ಸರಕಾರವನ್ನು ಟೀಕಿಸಿದ್ದಕ್ಕೆ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗದು: ಸುಪ್ರೀಂ ಕೋರ್ಟ್

Update: 2024-10-04 16:20 GMT

 ಸುಪ್ರೀಂ ಕೋರ್ಟ್ |  PTI

ಹೊಸದಿಲ್ಲಿ: ಸರಕಾರವನ್ನು ಟೀಕಿಸಿದ್ದಕ್ಕಾಗಿ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರಿಗೆ ಮಧ್ಯಂತರ ರಕ್ಷಣೆ ನೀಡುವ ಸಂದರ್ಭ ಸುಪ್ರೀಂ ಕೋರ್ಟ್, ಉತ್ತರಪ್ರದೇಶ ಸರಕಾರದ ಆಡಳಿತದಲ್ಲಿ ಜಾತಿ ವ್ಯವಸ್ಥೆ ಕುರಿತ ಲೇಖನಕ್ಕೆ ಸಂಬಂಧಿಸಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿರ್ದೇಶಿಸಿದೆ.

ತನ್ನ ಲೇಖನದ ಕುರಿತಂತೆ ಉತ್ತರಪ್ರದೇಶ ಪೊಲೀಸರು ತನ್ನ ವಿರುದ್ಧ ದಾಖಲಿಸಿದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಹಾಗೂ ಎಸ್‌ವಿಎನ್ ಭಟ್ಟಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.

ಈ ಪ್ರಕರಣದ ಕುರಿತಂತೆ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಉತ್ತರಪ್ರದೇಶ ಸರಕಾರಕ್ಕೆ ನೋಟಿಸು ಜಾರಿ ಮಾಡಿತು ಹಾಗೂ ಪ್ರಕರಣದ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.

ತನ್ನ ಸಂಕ್ಷಿಪ್ತ ಆದೇಶದಲ್ಲಿ ಪೀಠ ‘‘ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಜನರ ಅಭಿಪ್ರಾಯಗಳನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನು ಗೌರವಿಸಲಾಗುತ್ತದೆ. ಭಾರತದ ಸಂವಿಧಾನದ ಕಲಂ 19(1)(ಎ) ಅಡಿಯಲ್ಲಿ ಪತ್ರಕರ್ತರ ಹಕ್ಕುಗಳನ್ನು ರಕ್ಷಿಸಲಾಗುತ್ತದೆ. ಕೇವಲ ಸರಕಾರವನ್ನು ಟೀಕಿಸುವ ಬರೆಹಗಳ ಕಾರಣಕ್ಕೆ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಿಲ್ಲ’’ ಎಂದು ಅಭಿಪ್ರಾಯಿಸಿತು.

‘‘ಯಾದವ್ ರಾಜ್ ವರ್ಸಸ್ ಠಾಕೂರ್ ರಾಜ್ (ಅಥವಾ ಸಿಂಗ್ ರಾಜ್)’’ ಎಂಬ ಲೇಖನ ಬರೆದಿರುವುದಕ್ಕಾಗಿ ಉಪಾಧ್ಯಾಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಎಫ್‌ಐಆರ್ ಭಾರತೀಯ ನ್ಯಾಯ ಸಂಹಿತೆ (ಬಿಎಸ್‌ಎನ್) ಕಾಯ್ದೆಯ ಸೆಕ್ಷನ್ 353 (2), 197(1) (ಸಿ), 302, 356 (2) ಹಾಗೂ ಐಟಿ (ತಿದ್ದುಪಡಿ) ಕಾಯ್ದೆ, 2008ರ ಸೆಕ್ಷನ್ 66ರ ಅಡಿ ಶಿಕ್ಷಾರ್ಹ ಅಪರಾಧಗಳನ್ನು ಒಳಗೊಂಡಿತ್ತು.

ಉತ್ತರಪ್ರದೇಶ ಪೊಲೀಸರು ದಾಖಲಿಸಿದೆ ಎಫ್‌ಐಆರ್ ಹಾಗೂ ಇತರ ಸ್ಥಳಗಳಲ್ಲಿ ದಾಖಲಿಸಿರಬಹುದಾದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಉಪಾಧ್ಯಾಯ ಅವರು ಅರ್ಜಿಯಲ್ಲಿ ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News