ಗುಜರಾತ್ ತೆರವು ಕಾಯಾಚರಣೆ | ಆದೇಶದ ಉಲ್ಲಂಘನೆಯಾಗಿದ್ದರೆ ಕಟ್ಟಡಗಳ ಮರುಸ್ಥಾಪನೆ : ಸುಪ್ರೀಂ ಕೋರ್ಟ್

Update: 2024-10-04 15:47 GMT

ಸುಪ್ರೀಂ ಕೋರ್ಟ್ | PC : PTI  

ಹೊಸದಿಲ್ಲಿ : ಗುಜರಾತಿನ ಅಧಿಕಾರಿಗಳು ಆಸ್ತಿಗಳ ನೆಲಸಮ ಕುರಿತು ತನ್ನ ಆದೇಶವನ್ನು ಉಲ್ಲಂಘಿಸಿದ್ದು ಕಂಡುಬಂದರೆ ಕಟ್ಟಡಗಳನ್ನು ಮರುಸ್ಥಾಪಿಸುವಂತೆ ಅವರಿಗೆ ಸೂಚಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.

ತನ್ನ ಅನುಮತಿಯಿಲ್ಲದೆ ದೇಶಾದ್ಯಂತ ಅಪರಾಧ ಪ್ರಕರಣಗಳ ಆರೋಪಿಗಳ ಆಸ್ತಿಗಳು ಸೇರಿದಂತೆ ಯಾವುದೇ ಆಸ್ತಿಗಳನ್ನು ಧ್ವಂಸಗೊಳಿಸುವಂತಿಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ಸೆ.17ರ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಕೈಗೆತ್ತಿಕೊಂಡಿತ್ತು.

ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಗುಜರಾತಿನಲ್ಲಿ ಅಧಿಕಾರಿಗಳು ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ ಎಂದು ಅರ್ಜಿದಾರ ಸುಮ್ಮಸ್ತ ಪಟ್ನಿ ಮುಸ್ಲಿಮ್ ಜಮಾತ್ ಪರ ಹಿರಿಯ ವಕೀಲ ಸಂಜಯ ಹೆಗ್ಡೆ ಅವರು ಹೇಳಿದರು.

ಗುಜರಾತ್ ಅಧಿಕಾರಗಳ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ಈ ಕಟ್ಟಡಗಳು ಸಮುದ್ರಕ್ಕೆ ತಾಗಿಕೊಂಡಿದ್ದವು ಮತ್ತು ಸೋಮನಾಥ ದೇವಸ್ಥಾನದಿಂದ ಸುಮಾರು 340 ಮೀ.ಅಂತರದಲ್ಲಿದ್ದವು. ಇದು ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವ ವಿನಾಯತಿಯ ವ್ಯಾಪ್ತಿಯಲ್ಲಿದೆ ಎಂದು ತಿಳಿಸಿದರು.

‘ರಸ್ತೆ,ಬೀದಿ,ಪಾದಚಾರಿ ಮಾರ್ಗ,ರೈಲು ಮಾರ್ಗದಂತಹ ಅಥವಾ ಯಾವುದೇ ನದಿ ಅಥವಾ ಜಲಮೂಲಗಳಿಗೆ ತಾಗಿಕೊಂಡಿರುವ ಯಾವುದೇ ಸಾರ್ವಜನಿಕ ಸ್ಥಳದಲ್ಲಿರುವ ಅನಧಿಕೃತ ಕಟ್ಟಡಗಳಿಗೆ ಮತ್ತು ನ್ಯಾಯಾಲಯವು ನೆಲಸಮಗೊಳಿಸಲು ಆದೇಶಿಸಿರುವ ಪ್ರಕರಣಗಳಿಗೆ ನಮ್ಮ ಆದೇಶವು ಅನ್ವಯಿಸುವುದಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಸೆ.17ರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಪೀಠವು, ‘ಅಧಿಕಾರಿಗಳು ನಮ್ಮ ಆದೇಶವನ್ನು ಉಲ್ಲಂಘಿಸಿದ್ದು ಕಂಡು ಬಂದರೆ ನಾವು ಅವರನ್ನು ಜೈಲಿಗೆ ಕಳುಹಿಸುವುದು ಮಾತ್ರವಲ್ಲ, ನೆಲಸಮಗೊಳಿಸಲಾದ ಎಲ್ಲ ಕಟ್ಟಡಗಳನ್ನು ಮರುಸ್ಥಾಪಿಸುವಂತೆ ಅವರಿಗೆ ಸೂಚಿಸುತ್ತೇವೆ’ ಎಂದು ಖಡಕ್ಕಾಗಿ ಹೇಳಿತು.

ಅರ್ಜಿಯ ಕುರಿತು ಯಾವುದೇ ನೋಟಿಸ್ ಹೊರಡಿಸದ ಪೀಠವು ತನ್ನ ಉತ್ತರವನ್ನು ಸಲ್ಲಿಸುವಂತೆ ಮೆಹ್ತಾರಿಗೆ ಸೂಚಿಸಿತು ಮತ್ತು ವಿಚಾರಣೆಯನ್ನು ಅ.16ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News