ಕೇಂದ್ರದ ನೆರವಿಲ್ಲದೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರ ಒಂದು ದಿನವೂ ನಡೆಯಲು ಸಾಧ್ಯವಿಲ್ಲ: ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

Update: 2024-10-04 15:28 GMT

ಜೆ.ಪಿ.ನಡ್ಡಾ | PC : PTI 

ಶಿಮ್ಲಾ : ಕೇಂದ್ರ ಸರಕಾರದ ನೆರವಿಲ್ಲದೆ ಹಿಮಾಚಲ ಪ್ರದೇಶ ಸರಕಾರ ಒಂದು ದಿನವೂ ನಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದರು.

ಬಿಲಾಸ್ಪುರ್ ನಲ್ಲಿ ರಾಜ್ಯ ಬಿಜೆಪಿ ಘಟಕವು ಆಯೋಜಿಸಿದ್ದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಜೆ.ಪಿ.ನಡ್ಡಾ, ಕೇಂದ್ರ ಸರಕಾರವು ಹಿಮಾಚಲ ಪ್ರದೇಶ ಸರಕಾರಕ್ಕೆ 500 ಕೋಟಿ ರೂ. ಆದಾಯ ಕೊರತೆ ಅನುದಾನ ಹಾಗೂ ವೇತನಗಳು ಮತ್ತು ಪಿಂಚಣಿಗಾಗಿ 800 ಕೋಟಿ ರೂ. ಅನುದಾನವನ್ನು ಒದಗಿಸುತ್ತಿದೆ ಎಂದು ಹೇಳಿದರು.

“ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಎರಡು ನಾಲಗೆಯಲ್ಲಿ ಮಾತನಾಡುತ್ತಾರೆ ಎಂದು ಛೇಡಿಸಿದ ಜೆ.ಪಿ.ನಡ್ಡಾ, ಅವರು ಹಿಮಾಚಲ ಪ್ರದೇಶ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಏನನ್ನೂ ನೀಡುತ್ತಿಲ್ಲ ಎಂದು ಪ್ರಚಾರ ಮಾಡಿದ್ದರು. ಆದರೆ, ದಿಲ್ಲಿಗೆ ಬಂದಾಗ ಕೇಂದ್ರದ ನೆರವಿಗೆ ಕೃತಜ್ಞತೆ ಸಲ್ಲಿಸುವ ಅವರು, ಮತ್ತಷ್ಟು ಹಣಕಾಸು ನೆರವು ಬೇಕು ಎಂದು ಮನವಿ ಮಾಡುತ್ತಾರೆ. ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರವು ಕೇಂದ್ರ ಸರಕಾರದ ನೆರವಿಲ್ಲದೆ ಒಂದು ದಿನ ಕೂಡಾ ನಡೆಯಲು ಸಾಧ್ಯವಿಲ್ಲ. ಆದರೆ, ಆ ಹಣವನ್ನು ಯಾವುದಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರಕಾರದ ಬಳಿ ಯಾವುದೇ ಲೆಕ್ಕವಿಲ್ಲ” ಎಂದು ಅವರು ಆರೋಪಿಸಿದರು.

ಸೆಪ್ಟೆಂಬರ್ ತಿಂಗಳ ಮೊದಲನೆ ತಾರೀಖಿನಂದು ಸರಕಾರಿ ನೌಕರರಿಗೆ ವೇತನ ವಿತರಿಸದೆ ಮುಖ್ಯಮಂತ್ರಿ ಸುಖ್ವಿಂದರ್ ಈ ಹಿಂದಿನ ಎಲ್ಲ ಕಾಂಗ್ರೆಸ್ ಸರಕಾರಗಳ ದಾಖಲೆಯನ್ನು ಮುರಿದಿದ್ದಾರೆ ಎಂದು ವ್ಯಂಗ್ಯವಾಡಿದ ನಡ್ಡಾ, “ಇದು ಹಾಲಿ ಸರಕಾರದ ಬಹು ದೊಡ್ಡ ವೈಫಲ್ಯ” ಎಂದು ದೂರಿದರು.

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಾದಕ ದ್ರವ್ಯ ಜಾಲ ಬೆಳೆಯತೊಡಗಿದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರಿಗೆ ಸೇರಿದ್ದ 5,600 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಎಂದರೆ, ಭ್ರಷ್ಟಾಚಾರ, ಅಪರಾಧೀಕರಣ ಮತ್ತು ಕಮಿಷನ್ ಎಂದು ಅವರು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News