ತಮಿಳುನಾಡು ಬಿಎಸ್ಪಿ ಮುಖಂಡನ ಹತ್ಯೆ: ಆಘಾತ ವ್ಯಕ್ತಪಡಿಸಿದ ರಾಹುಲ್ ಗಾಂಧಿ
ಹೊಸದಿಲ್ಲಿ: ತಮಿಳುನಾಡು ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷನ ಬರ್ಬರ ಹತ್ಯೆ ಪ್ರಕರಣದ ಬಗ್ಗೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳನ್ನು ಶೀಘ್ರದಲ್ಲೇ ಪತ್ತೆ ಮಾಡಿ ನ್ಯಾಯಾಂಗದ ಕಟಕಟೆಗೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕೆ.ಆರ್ಮ್‍ಸ್ಟ್ರಾಂಗ್ ಅವರನ್ನು ಅಪರಿಚಿತ ದುಷ್ಕರ್ಮಿಗಳ ಗುಂಪು, ಜುಲೈ 5ರಂದು ಚೆನ್ನೈನ ಪೆರಂಬೂರಿನಲ್ಲಿರುವ ಅವರ ನಿವಾಸದ ಬಳಿ ಬರ್ಬರವಾಗಿ ಹತ್ಯೆ ಮಾಡಿತ್ತು.
ಎಕ್ಸ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್‍ಗಾಂಧಿ, "ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಿರು ಅರ್ಮ್‍ಸ್ಟ್ರಾಂಗ್ ಅವರ ಬರ್ಬರ ಹತ್ಯೆಯಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಹಾಗೂ ಅನುಯಾಯಿಗಳಿಗೆ ಸಾಂತ್ವನ ಹೇಳುತ್ತಿದ್ದೇನೆ" ಎಂದು ಬರೆದಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. ಸರ್ಕಾರ ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯದ ಕಟಕಟೆಗೆ ತರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.