ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಗ್ನಿವೀರ ಆತ್ಮಹತ್ಯೆ
ಹೊಸದಿಲ್ಲಿ: ಅಗ್ನಿಪಥ ಯೋಜನೆ ಬಗ್ಗೆ ವಿವಾದ ಮುಂದುವರಿದಿರುವ ನಡುವೆಯೇ, ಅಗ್ನಿವೀರರಾಗಿ ನಿಯೋಜನೆಯಾದ ಒಂದು ವರ್ಷದೊಳಗೇ ಸುಮಾರು 20 ಮಂದಿ ಅಗ್ನಿವೀರರು ಮೃತಪಟ್ಟಿರುವ ಅಂಶ ಬೆಳಕಿಗೆ ಬಂದಿದೆ. 2023ರ ಆಗಸ್ಟ್ ನಲ್ಲಿ ಅಗ್ನಿವೀರರ ಮೊದಲ ಬ್ಯಾಚ್ ಸೇನೆಗೆ ನಿಯೋಜನೆಗೊಂಡಿತ್ತು ಎಂದು newindianexpress.com ವರದಿ ಮಾಡಿದೆ.
ಭೂಸೇನೆಗೆ ಸೇರಿದ ಸುಮಾರು 18 ಮಂದಿ ಹಾಗೂ ಈಗ ವಾಯುಪಡೆಗೆ ಸೇರಿದ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸೇನಾ ಮೂಲಗಳು ದೃಢಪಡಿಸಿವೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲು.
ಆಗ್ರಾ ವಾಯುಪಡೆ ಕೇಂದ್ರದಲ್ಲಿ ಸೆಂಟ್ರಿ ಕರ್ತವ್ಯಕ್ಕೆ ನಿಯೋಜಿತಾಗಿದ್ದ ಶ್ರೀಕಾಂತ್ ಕುಮಾರ್ ಚೌಧರಿ (22) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇವರು ಉತ್ತರ ಪ್ರದೇಶದ ಬಲಿಯಾ ಮೂಲದವರು. 2022ರಲ್ಲಿ ಅಗ್ನಿವೀರರಾಗಿ ವಾಯುಪಡೆಗೆ ಸೇರಿದ್ದರು. ಸಾವಿನ ಕಾರಣ ಪತ್ತೆ ಮಾಡಲು ತನಿಖಾ ತಂಡ ರಚಿಸಲಾಗಿದೆ.
ಸೇನೆಯಲ್ಲಿ ಮೊದಲು ವರದಿಯಾದ ಅಗ್ನಿವೀರ ಆತ್ಮಹತ್ಯೆ ಪ್ರಕರಣ ಈ ಮೊದಲು ವಿವಾದಕ್ಕೆ ಕಾರಣವಾಗಿತ್ತು. 2023ರ ಅಕ್ಟೋಬರ್ 11ರಂದು ಅಮೃತಪಾಲ್ ಸಿಂಗ್ (19) ಎಂಬ ಅಗ್ನಿವೀರ ಜಮ್ಮುವಿನಲ್ಲಿ ಮೃತಪಟ್ಟಿದ್ದರು. ಆಗ ಅವರಿಗೆ ಮಿಲಿಟರಿ ಅಂತ್ಯಸಂಸ್ಕಾರದ ಗೌರವ ನೀಡದಿದ್ದುದು ವಿವಾದಕ್ಕೆ ಕಾರಣವಾಗಿತ್ತು.