ನಾಗ್ಪುರದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ: ಕಾಂಗ್ರೆಸ್-ಬಿಜೆಪಿ ಶಕ್ತಿ ಪ್ರದರ್ಶನ
ನಾಗ್ಪುರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ರವಿವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾದ್ರಾ ನಾಗ್ಪುರದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಇದು ಕಾರ್ಯಕ್ರಮದ ಕೊನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವಿನ ಸಂಘರ್ಷಕ್ಕೂ ಕಾರಣವಾಯಿತು.
ಪ್ರಿಯಾಂಕಾ ಅವರ ಚೊಚ್ಚಲ ರೋಡ್ ಶೋ ನಾಗ್ಪುರ ಪಶ್ಚಿಮ ಮತ್ತು ನಾಗ್ಪುರ ಕೇಂದ್ರ ಕ್ಷೇತ್ರಗಳಲ್ಲಿ ಹಾದುಹೋಗಿದ್ದು, ಸ್ಥಳೀಯ ಜನರಿಂದ ದೊಡ್ಡ ಪ್ರಮಾಣದ ಸ್ಪಂದನೆ ಕಂಡುಬಂತು. ಎಐಸಿಸಿ ಪ್ರಧಾನ ಕಾರ್ಯದರ್ಶಿಯವರು ಕಾಂಗ್ರೆಸ್ ಬ್ಯಾನರ್ ಗಳಿಂದ ಅಲಕೃಂತಗೊಂಡ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ನಾಗ್ಪುರ ಪಶ್ಚಿಮದಿಂದ ರೋಡ್ ಶೋ ಆರಂಭವಾದಾಗ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು. ಜನಸ್ತೋಮದಲ್ಲಿ ಕೈಬೀಸಿ ನಗೆ ಬೀರಿದ ಪ್ರಿಯಾಂಕಾ ಅವರ ಭಾವಚಿತ್ರ ಮತ್ತು ವಿಡಿಯೊವನ್ನು ಚಿತ್ರೀಕರಿಸಿಕೊಂಡು ಅಸಂಖ್ಯಾತ ಮಂದಿ ಸಂಭ್ರಮಿಸಿದರು. ಬಿಜೆಪಿ ಪ್ರಾಬಲ್ಯದ ನಾಗ್ಪುರ ಕೇಂದ್ರ ಕ್ಷೇತ್ರದಲ್ಲೂ ಒಳ್ಳೆಯ ಸ್ಪಂದನೆ ಸಿಕ್ಕಿತು.
ಆದರೆ ಬಡ್ಕಾಸ್ ಚೌಕದಲ್ಲಿ ರೋಡ್ ಶೋ ಇನ್ನೇನು ಅಂತ್ಯಗೊಳ್ಳಬೇಕು ಎಂಬ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಗುಂಪು ಸೇರಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಇದು ಕಾಂಗ್ರೆಸ್ ಬೆಂಬಲಿಗರನ್ನು ಕೆರಳಿಸಿತು. ಪ್ರಿಯಾಂಕಾ ಗಾಂಧಿ ಅಲ್ಲಿಂದ ತೆರಳಿದ ಬಳಿಕ ಕೇಂದ್ರ ನಾಗ್ಪುರ ಕಾಂಗ್ರೆಸ್ ಅಭ್ಯರ್ಥಿ ಬಂಟಿ ಶೆಲ್ಕೆ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಮಾತಿಕ ಚಕಮಕಿ ನಡೆಯಿತು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಶೆಲ್ಕೆ ವಿರುದ್ಧ ಬಿಜೆಪಿಯ ಪ್ರವೀಣ್ ಪ್ರಭಾಕರ ರಾವ್ ಡಾಟ್ಕೆ ಸ್ಪರ್ಧಿಸುತ್ತಿದ್ದಾರೆ.