ಮಣಿಪುರ ಗಡಿಯಲ್ಲಿ ಮತ್ತೆರಡು ಮೃತದೇಹ ಪತ್ತೆ
ಗುವಾಹತಿ: ಗೋಣಿಚೀಲದಲ್ಲಿ ಕಟ್ಟಿದ್ದ ವಿವಸ್ತ್ರ ಮಹಿಳೆ ಮತ್ತು ಹೆಣ್ಣುಮಗುವಿನ ಶವ ದಕ್ಷಿಣ ಅಸ್ಸಾಂನ ಬರಾಕ್ ನದಿಯಲ್ಲಿ ಭಾನುವಾರ ಪತ್ತೆಯಾಗಿದೆ. ನೆರೆಯ ಮಣಿಪುರದಲ್ಲಿ ಆರು ಶವಗಳು ಪತ್ತೆಯಾದ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರದ ನಡುವೆಯೇ ಈ ಘಟನೆ ವರದಿಯಾಗಿದೆ. ಜಿರಿಬಾಮ್ ನ ಪರಿಹಾರ ಶಿಬಿರದಿಂದ ನಾಪತ್ತೆಯಾದ ಮೂವರು ಮಹಿಳೆಯರು ಮತ್ತು ಮಕ್ಕಳ ಶವ ಮೊನ್ನೆ ಪತ್ತೆಯಾಗಿತ್ತು.
ಅಸ್ಸಾನ ಕಚಾರ್ ನಲ್ಲಿರುವ ಚಿರಿಘಾಟ್ ನಲ್ಲಿ ಒಂದು ದೇಹ ಪತ್ತೆಯಾಗಿದ್ದರೆ, ಇದೇ ಜಿಲ್ಲೆಯ ಸಿಂಗರ್ಬಂದ್ ನಲ್ಲಿ ಮತ್ತೊಂದು ಶವ ಪತ್ತೆಯಾಗಿದೆ. ಇಂಪಾಲ ಕಣಿವೆಯಲ್ಲಿ ಒಂಬತ್ತು ಮಂದಿ ಬಿಜೆಪಿ ಶಾಸಕರು ಸೇರಿದಂತೆ 13 ಶಾಸಕರ ಮನೆಗಳ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿದ ಮರುದಿನವೇ ಈ ಘಟನೆ ವರದಿಯಾಗಿದೆ. ಪಶ್ಚಿಮ ಇಂಫಾಲದಲ್ಲಿರುವ ಬಿಜೆಪಿ ಶಾಸಕ ರಬೀಂದ್ರೊ ಅವರನ್ನು ಭೇಟಿ ಮಾಡಲು ಬಯಸಿದ ಪ್ರತಿಭಟನಾಕಾರರು, ಅವರ ನಿವಾಸವನ್ನು ರವಿವಾರ ಸಂಜೆ ಧ್ವಂಸಗೊಳಿಸಿದರು.
ಶನಿವಾರ ಮತ್ತೊಬ್ಬ ಶಾಸಕರ ಮನೆ ಮೇಲೆ ದಾಳಿ ನಡೆದಿತ್ತು. ಲೋಕೋಪಯೋಗಿ ಸಚಿವ ಗೋವಿಂದ ಕೊಂತುಜಾಮ್, ಬಿಜೆಪಿ ಶಾಸಕರಾದ ರಾಧೇಶ್ಯಾಂ ಮತ್ತು ಪಾವನಂ ಬ್ರಿಜೋನ್ ಅವರ ನಿವಾಸ, ಕಾಂಗ್ರೆಸ್ ಶಾಸಕ ಟಿಎಚ್ ಲೋಕೇಶ್ವರ ಅವರ ನಿವಾಸಗಳನ್ನು ಕೂಡಾ ಸುಟ್ಟುಹಾಕಲಾಗಿದೆ.
ಪ್ರತಿಭಟನಾಕಾರರ ಒಂದು ಗುಂಪು ಎನ್ ಪಿಪಿಎ ಕಕ್ಚಿಂಗ್ ಶಾಸಕ ಮಾಯಾಂಗಲಮ್ಬಮ್ ರಾಮೇಶ್ವ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ಪೊಲೀಸರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 23 ಮಂದಿಯನ್ನು ಬಂಧಿಸಿದ್ದಾರೆ ಹಾಗೂ ಅನಿರ್ದಿಷ್ಟ ಅವಧಿಯ ಕರ್ಫ್ಯೂ ವಿಧಿಸಲಾಗಿದೆ. ಪೂರ್ವ ಇಂಫಾಲ್, ಪಶ್ಚಿಮ ಇಂಫಾಲ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.