ತಮಿಳುನಾಡು BSP ಮುಖ್ಯಸ್ಥನ ಹತ್ಯೆ ಪ್ರಕರಣ: ಎಂಟು ಮಂದಿ ಶಂಕಿತರು ವಶಕ್ಕೆ
ಚೆನ್ನೈ: ಶುಕ್ರವಾರ ರಾತ್ರಿ ಚೆನ್ನೈನ ಸೆಂಬಿಯಮ್ ಬಳಿ ಆರು ಮಂದಿ ಅಪರಿಚಿತರ ಗುಂಪೊಂದು ತಮಿಳುನಾಡು ಬಿಎಸ್ಪಿ ಘಟಕದ ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ (52) ಅವರನ್ನು ಹತ್ಯೆಗೈದಿದ್ದು, ಈ ಸಂಬಂಧ ಶುಕ್ರವಾರ ತಡ ರಾತ್ರಿ ಎಂಟು ಮಂದಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪೆರಂಬದೂರು ಬಳಿಯ ಸೆಂಬಿಯಮ್ ಗ್ರಾಮದ ವೇಣುಗೋಪಾಲ್ ಬೀದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕಾಮಗಾರಿಯನ್ನು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸಂಜೆ 7 ಗಂಟೆಯ ಹೊತ್ತಿನಲ್ಲಿ ಆರ್ಮ್‌ಸ್ಟ್ರಾಂಗ್ ಪರಿಶೀಲಿಸುತ್ತಿದ್ದಾಗ, ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಗಳ ವೇಷದಲ್ಲಿ ಬೈಕ್ ಗಳಲ್ಲಿ ಬಂದಿರುವ ಗುಂಪೊಂದು ಅವರನ್ನು ಸುತ್ತುವರಿದಿದೆ. ನಂತರ ಚಾಕುಗಳಿಂದ ಅವರನ್ನು ಇರಿದು ಕೊಂದಿರುವ ಗುಂಪು, ಸ್ಥಳದಿಂದ ಪರಾರಿಯಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಆರ್ಮ್‌ಸ್ಟ್ರಾಂಗ್ ಅವರನ್ನು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕೊಂಡೊಯ್ದರೂ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್ ಅವರ ಇಬ್ಬರು ಸಹಚರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣದ ಕುರಿತು ತನಿಖೆ ನಡೆಸಲು ಉತ್ತರ ಚೆನ್ನೈನ ಹೆಚ್ಚುವರಿ ಪೊಲೀಸ್ ಆಯುಕ್ತ ಅಸ್ರಾ ಗರ್ಗ್ ನೇತೃತ್ವದಲ್ಲಿ 10 ವಿಶೇಷ ತನಿಖಾ ತಂಡಗಳನ್ನು ಚೆನ್ನೈ ನಗರ ಪೊಲೀಸರು ರಚಿಸಿದ್ದರು. ಘಟನೆ ನಡೆದ ಕೆಲವೇ ಗಂಟೆಗಳ ಅವಧಿಯಲ್ಲಿ ಎಂಟು ಮಂದಿ ಶಂಕಿತರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.