ಮಧ್ಯಪ್ರದೇಶ: ಕಳೆದ ಮೂರು ವರ್ಷಗಳಲ್ಲಿ 31,000ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ

Update: 2024-07-06 07:26 GMT

ಸಾಂದರ್ಭಿಕ ಚಿತ್ರ

ಭೋಪಾಲ್: ಕಳೆದ ಮೂರು ವರ್ಷಗಳಲ್ಲಿ ಮಧ್ಯಪ್ರದೇಶದಿಂದ 31,000ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಅಧಿಕೃತ ದತ್ತಾಂಶದ ಪ್ರಕಾರ, 2021-2024ರ ಅವಧಿಯ ನಡುವೆ ಮಧ್ಯಪ್ರದೇಶದಿಂದ 28,857 ಮಹಿಳೆಯರು ಹಾಗೂ 2,944 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು NDTV ವರದಿ ಮಾಡಿದೆ.

ಮಧ್ಯಪ್ರದೇಶ ವಿಧಾನಸಭೆಯಲ್ಲಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಬಾಲ ಬಚ್ಚನ್ ಕೇಳಿದ ಪ್ರಶ್ನೆಗೆ ಪ್ರತಿಯಾಗಿ ಈ ಅಂಕಿಸಂಖ್ಯೆಗಳನ್ನು ಸರಕಾರ ಒದಗಿಸಿದೆ. ದತ್ತಾಂಶದ ಪ್ರಕಾರ, ಪ್ರತಿ ದಿನ ಸರಾಸರಿ 28 ಮಹಿಳೆಯರು ಹಾಗೂ ಮೂವರು ಬಾಲಕಿಯರು ನಾಪತ್ತೆಯಾಗುತ್ತಿದ್ದಾರೆ. ಈ ಆತಂಕಕಾರಿ ಅಂಕಿಸಂಖ್ಯೆಯ ಹೊರತಾಗಿಯೂ, ಅಧಿಕೃತವಾಗಿ ಕೇವಲ 724 ನಾಪತ್ತೆ ಪ್ರಕರಣಗಳನ್ನು ಮಾತ್ರ ದಾಖಲಿಸಿಕೊಳ್ಳಲಾಗಿದೆ.

ಉಜ್ಜಯಿನಿಯಲ್ಲಿ ಕಳೆದ 34 ತಿಂಗಳ ಅವಧಿಯಲ್ಲಿ 676 ಮಹಿಳೆಯರು ನಾಪತ್ತೆಯಾಗಿದ್ದರೂ, ಈವರೆಗೆ ಒಂದೇ ಒಂದು ನಾಪತ್ತೆ ಪ್ರಕರಣ ದಾಖಲಾಗಿಲ್ಲ.

ಸಾಗರ್ ಜಿಲ್ಲೆಯಲ್ಲಿ ಅತ್ಯಧಿಕ ಬಾಲಕಿಯ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಈವರೆಗೆ 245 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇಂದೋರ್ ಜಿಲ್ಲೆಯಲ್ಲಿ ಒಟ್ಟು 2,384 ಮಹಿಳೆಯರು ನಾಪತ್ತೆಯಾಗಿದ್ದು, ಇಡೀ ರಾಜ್ಯದಲ್ಲೇ ಇದು ಅತ್ಯಧಿಕ ಸಂಖ್ಯೆಯಾಗಿದೆ.

ಇಂದೋರ್ ನಲ್ಲಿ ಕಳೆದ ಒಂದು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ 479 ಮಹಿಳೆಯರು ನಾಪತ್ತೆಯಾಗಿದ್ದರೂ, ಕೇವಲ 15 ನಾಪತ್ತೆ ಪ್ರಕರಣಗಳು ಮಾತ್ರ ದಾಖಲಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News