ಲೋಕಸಭೆಯಲ್ಲಿ ಭದ್ರತಾ ವೈಫಲ್ಯದ ಬಗ್ಗೆ ಪ್ರತಿಪಕ್ಷಗಳ ಧರಣಿ: 15 ಸಂಸದರು ಅಮಾನತು

Update: 2023-12-14 10:57 GMT

Photo: PTI

ಹೊಸದಿಲ್ಲಿ: ಲೋಕಸಭೆಯ ಕಲಾಪಕ್ಕೆ ಅಡ್ಡಿ ಮಾಡಿದ್ದಕ್ಕಾಗಿ 15 ವಿಪಕ್ಷ ಸಂಸದರನ್ನು ಇಂದು ಸದನದಿಂದ ಅಮಾನತು ಮಾಡಲಾಗಿದೆ. ಸಂಸದರ ಹೆಸರುಗಳನ್ನು ಸ್ಪೀಕರ್‌ ಎತ್ತಿದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆಯಲ್ಲಿ ಬುಧವಾರ ಭಾರೀ ಭದ್ರತಾ ವೈಫಲ್ಯದ ನಂತರದ ಬೆಳವಣಿಗೆ ಇದಾಗಿದೆ.

ಅಮಾನತುಗೊಂಡವರ ಪೈಕಿ 9 ಮಂದಿ ಕಾಂಗ್ರೆಸ್‌ ಸಂಸದರು, ಇಬ್ಬರು ಸಿಪಿಎಂ ಸಂಸದರು, ಒಬ್ಬರು ಸಿಪಿಐ ಸಂಸದರು ಹಾಗೂ ಇಬ್ಬರು ಡಿಎಂಕೆ ಸಂಸದರಾಗಿದ್ದಾರೆ.

ಅಮಾನತುಗೊಂಡವರಲ್ಲಿ ಕಾಂಗ್ರೆಸ್‌ನ ಮಣಿಕ್ಕಂ ಠಾಗೋರ್‌, ಮುಹಮ್ಮದ್‌ ಜಾವೇದ್‌, ವಿ ಕೆ ಶ್ರೀಕಂಠನ್‌, ಬೆನ್ನಿ ಬೆಹನನ್‌, ಡಿಎಂಕೆಯ ಕನ್ನಿಮೋಝಿ ಮತ್ತು ಎಸ್‌ ಆರ್‌ ಪಾರ್ಥಿಬನ್‌, ಸಿಪಿಎಂ ನ ಪಿ ಆರ್‌ ನಟರಾಜನ್‌ ಮತ್ತು ಎಸ್‌ ವೆಂಕಟೇಶನ್‌ ಹಾಗೂ ಸಿಪಿಐನ ಕೆ ಸುಬ್ಬರಾಯನ್‌ ಸೇರಿದ್ದಾರೆ.

ಅಶಿಸ್ತು ತೋರಿದ್ದಾರೆಂದು ಆರೋಪಿಸಿ ಐದು ಕಾಂಗ್ರೆಸ್‌ ಸಂಸದರಾದ ಟಿ ಎನ್‌ ಪ್ರತಾಪನ್‌, ಹಿಬಿ ಈಡನ್‌, ಜೋತಿಮಣಿ, ರಮ್ಯಾ ಹರಿದಾಸ್‌ ಮತ್ತು ಡೀನ್‌ ಕುರಿಯಾಕೋಸ್‌ ಅವರನ್ನು ಅಧಿವೇಶನದ ಉಳಿದ ಸಮಯಕ್ಕೆ ಅಮಾನತುಗೊಳಿಸುವ ನಿರ್ಣಯವನ್ನು ಇಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಮಂಡಿಸಿದರು.

ಲೋಕಸಭೆಯನ್ನು ನಾಳೆ ಬೆಳಿಗ್ಗೆ 11 ಗಂಟೆ ತನಕ ಮುಂದೂಡಲಾಗಿದೆ.

ಬುಧವಾರದ ಭದ್ರತಾ ವೈಫಲ್ಯದ ನಂತರ, ವಿಪಕ್ಷಗಳು ಸಮಗ್ರ ತನಿಖೆಗೆ ಹಾಗೂ ಆರೋಪಿಗಳ ಪೈಕಿ ಒಬ್ಬಾತನಿಗೆ ಪಾಸ್‌ ಒದಗಿಸಿದ್ದರೆನ್ನಲಾದ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರನ್ನು ತನಿಖೆಗೊಳಪಡಿಸಲು ಪಟ್ಟು ಹಿಡಿದಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News