ಜುಲೈನಲ್ಲಿ ವಾಡಿಕೆಗಿಂತ ಶೇಕಡ 15ರಷ್ಟು ಅಧಿಕ ಮಳೆ
ಹೊಸದಿಲ್ಲಿ: ದೇಶದಲ್ಲಿ ಜುಲೈ ತಿಂಗಳಲ್ಲಿ ದೇಶಾದ್ಯಂತ ವ್ಯಾಪಕ ಮಳೆಯಾಗಿದ್ದು, ಮಳೆ ಪ್ರಮಾಣ ವಾಡಿಕೆಗಿಂತ ಶೇಕಡ 15ರಷ್ಟು ಅಧಿಕವಾಗಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಆದ್ದರಿಂದ ಜೂನ್ ಅಂತ್ಯದ ವೇಳೆಗೆ ದೇಶದಲ್ಲಿ ಇದ್ದ ಶೇಕಡ 10ರಷ್ಟು ಮಳೆ ಅಭಾವ ಪರಿಸ್ಥಿತಿ ಬದಲಾಗಿ ಇದೀಗ ವಾಡಿಕೆಗಿಂತ ಶೇಕಡ 5ರಷ್ಟು ಅಧಿಕ ಮಳೆಯಾದಂತಾಗಿದೆ. ಆದರೆ ಪೂರ್ವ ಹಾಗೂ ಉತ್ತರ ಭಾರತದಲ್ಲಿ ಶೇಕಡ 25ರಷ್ಟು ಮಳೆ ಕೊರತೆ ಪರಿಸ್ಥಿತಿ ಮುಂದುವರಿದಿದೆ. ದೇಶದಲ್ಲಿ ಕಳೆದ 35 ದಿನಗಳ ಸುಧೀರ್ಘ ಅವಧಿಯ ಸಕ್ರಿಯ ಮುಂಗಾರು ಪರಿಸ್ಥಿತಿ ಇದ್ದ ಪರಿಣಾಮ ವ್ಯಾಪಕ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಆದರೂ ಮುಂಗಾರು ಮಳೆ ಆಗಸ್ಟ್ 6-7ರ ವೇಳೆಗೆ ದುರ್ಬಲ ಸ್ಥಿತಿಯನ್ನು ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಈಗಾಗಲೇ ದಕ್ಷಿಣ ಭಾರತ ಮತ್ತು ಕೇಂದ್ರ ಭಾರತದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ದೇಶಾದ್ಯಂತ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆ ಇದೆ.
ಎಲ್ ನಿನೊ ಪ್ರಭಾವದಿಂದ ಭಾರತದ ಮುಂಗಾರು ಹಂಗಾಮಿನ ಎರಡನೇ ಹಂತದಲ್ಲಿ ಅಂದರೆ ಆಗಸ್ಟ್- ಸೆಪ್ಟೆಂಬರ್ ಅವಧಿಯಲ್ಲಿ ಮಳೆಯ ಕೊರತೆ ಉದ್ಭವಿಸಬಹುದು ಎಂಬ ಭೀತಿಯ ನಡುವೆಯೂ, ಈಗ ಬಿದ್ದ ಸುಧೀರ್ಘ ಮಳೆಯಿಂದಾಗಿ ವಾರ್ಷಿಕವಾಗಿ ವಾಡಿಕೆ ಮಳೆ ಅಂದರೆ ಶೇಕಡ 96ರಿಂದ 104ರಷ್ಟು ಆಗುವ ನಿರೀಕ್ಷೆ ಇದೆ ಎಂದು ಇಲಾಖೆ ಅಂದಾಜಿಸಿದೆ. ಮುಂಗಾರಿನ ಸಕ್ರಿಯ ಹಂತ ಜೂನ್ 24ಕ್ಕೆ ಆರಂಭವಾಗಿದ್ದು, ನಂತರದ 34 ದಿನಗಳಲ್ಲಿ 24 ದಿನಗಳ ಕಾಲ ಪ್ರತಿ ದಿನ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಜುಲೈ 30ರ ವೇಳೆಗೆ ವಾಯವ್ಯ ಭಾರತದಲ್ಲಿ ಒಟ್ಟಾರೆ ಮಳೆ ಪ್ರಮಾಣ ವಾಡಿಕೆಗಿಂತ ಶೇಕಡ 33ರಷ್ಟು ಅಧಿಕವಾಗಿದೆ. ಕೇಂದ್ರ ಭಾರತದಲ್ಲಿ ಈ ಪ್ರಮಾಣ ಶೇಕಡ 14 ಇದರೆ ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಶೇಕಡ 6ರಷ್ಟು ಅಧಿಕ ಮಳೆಯಾಗಿದೆ. ಆದರೆ ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಶೇಕಡ 25ರಷ್ಟು ಕೊರತೆ ಇದೆ. ಕಳೆದ ತಿಂಗಳ ಅಂತ್ಯದ ವೇಳೆಗೆ ದೇಶದ 36 ಮಳೆ ಮಾಪನ ಕೇಂದ್ರಗಳ ಪೈಕಿ 19ರಲ್ಲಿ ಶೇಕಡ 20ರಷ್ಟು ಮಳೆ ಕೊರತೆ ಸ್ಥಿತಿ ಇತ್ತು. ಇದು ಜುಲೈ 30ಕ್ಕೆ ಆರು ಕೇಂದ್ರಗಳಿಗೆ ಇಳಿದಿದೆ.