ಕಳೆದ ಒಂದು ವರ್ಷದಲ್ಲಿ 188 ಮಂದಿ ಕರ್ತವ್ಯನಿರತ ಪೊಲೀಸರು ಮೃತ್ಯು: ಅಮಿತ್ ಶಾ
ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಮಾಡುವಾಗ 188 ಮಂದಿ ಕರ್ತವ್ಯನಿರತ ಪೊಲೀಸರು ಮೃತಪಟ್ಟಿದ್ದಾರೆ ಎಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಹುತಾತ್ಮರ ತ್ಯಾಗವನ್ನು ದೇಶವು ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
"ಕಳೆದ ಒಂದು ವರ್ಷದಲ್ಲಿ, ಸೆಪ್ಟೆಂಬರ್ 1, 2022ರಿಂದ ಆಗಸ್ಟ್ 31, 2023ರವರೆಗೆ ದೇಶದ ಭದ್ರತೆಯನ್ನು ಖಾತ್ರಿಗೊಳಿಸಿ, ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಾಗ 188 ಮಂದಿ ಪೊಲೀಸರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ" ಎಂದು ಪೊಲೀಸ್ ಹುತಾತ್ಮ ದಿನಾಚರಣೆಯಂದು ಗೌರವ ನಮನ ಸಲ್ಲಿಸಿದ ನಂತರ ಅವರು ಮಾಹಿತಿ ನೀಡಿದ್ದಾರೆ.
ದೇಶಕ್ಕಾಗಿ ದುಡಿಯುತ್ತಿರುವ ಎಲ್ಲ ಸಿಬ್ಬಂದಿಗಳ ಪೈಕಿ ಪೊಲೀಸರ ಕೆಲಸ ಅತ್ಯಂತ ಕಠಿಣವಾಗಿದ್ದು, ಹಗಲು ರಾತ್ರಿ, ಚಳಿಗಾಲ-ಮಳೆಗಾಲ, ಹಬ್ಬ ಅಥವಾ ಸಾಮಾನ್ಯ ದಿನವಾಗಿದ್ದರೂ, ಪೊಲೀಸರಿಗೆ ತಮ್ಮ ಕುಟುಂಬಗಳೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಲು ಅವಕಾಶ ದೊರೆಯುತ್ತಿಲ್ಲ ಎಂದು ಅಮಿತ್ ಶಾ ವಿಷಾದಿಸಿದ್ದಾರೆ.
ಪೊಲೀಸ್ ಪಡೆಗಳು ತಮ್ಮ ಜೀವನದ ಸುವರ್ಣ ಗಳಿಗೆಗಳನ್ನು ತಮ್ಮ ಕುಟುಂಬಗಳಿಂದ ದೂರ ಕಳೆಯುತ್ತಿದ್ದು, ಹಲವಾರು ಮಂದಿ ನಮ್ಮ ದೇಶದ ವಿಸ್ತಾರವಾದ ಗಡಿಯನ್ನು ಕಾಯುತ್ತಿದ್ದಾರೆ ಹಾಗೂ ತಮ್ಮ ಶೌರ್ಯ ಮತ್ತು ತ್ಯಾಗದಿಂದ ದೇಶವನ್ನು ರಕ್ಷಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.