19 ಶಾಸಕರು ಶರದ್ ಪವಾರ್ ಬಣಕ್ಕೆ ಮತ್ತೆ ವಾಪಸ್: ಎನ್‍ಸಿಪಿ ಮುಖಂಡ

Update: 2024-06-18 02:15 GMT

PC : NDTV 

ಮುಂಬೈ: ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದ ಬಳಿಕ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‍ಸಿಪಿಯಿಂದ 18-19 ಶಾಸಕರು ಶರದ್ ಪವಾರ್ ನೇತೃತ್ವದ ಎನ್‍ಸಿಪಿ(ಎಸ್ಪಿ)ಗೆ ಆಗಮಿಸಲಿದ್ದಾರೆ ಎಂದು ಪಕ್ಷದ ಮುಖಂಡ ರೋಹಿತ್ ಪವಾರ್ ಸೋಮವಾರ ಹೇಳಿದ್ದಾರೆ.

2023ರ ಜುಲೈನಲ್ಲಿ ಪಕ್ಷ ವಿಭಜನೆಯಾದ ಬಳಿಕ ಅಜಿತ್ ಬಣದ ಬಹಳಷ್ಟು ಮಂದಿ ಶಾಸಕರು ಪಕ್ಷದ ಸಂಸ್ಥಾಪಕ ಶರದ್ ಪವಾರ್ ಬಗ್ಗೆಯಾಗಲೀ, ಇತರ ಹಿರಿಯ ಮುಖಂಡರ ವಿರುದ್ಧವಾಗಲೀ ಅಪಸ್ವರ ಎತ್ತಿಲ್ಲ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು.

"ಆದರೆ ಅವರು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಪಡೆಯಬೇಕಾಗುತ್ತದೆ. ಆದ್ದರಿಂದ ಅವರು ಅಧಿವೇಶನ ಮುಕ್ತಾಯವಾಗುವವರೆಗೆ ಕಾಯುತ್ತಾರೆ" ಎಂದು ಶರದ್ ಪವಾರ್ ಅವರ ಸೋದರ ಮೊಮ್ಮಗನೂ ಆಗಿರುವ ರೋಹಿತ್ ತಿಳಿಸಿದರು.

ಅಜಿತ್ ಬಣದ 18-19 ಶಾಸಕರು ಪವಾರ್ ಸಾಹೇಬ್ ಮತ್ತು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂಗಾರು ಅಧಿವೇಶನ ಮುಗಿದ ತಕ್ಷಣ ಅವರು ಪಕ್ಷಕ್ಕೆ ಮರಳಲಿದ್ದಾರೆ. ಪಕ್ಷದ ತೆಕ್ಕೆಗೆ ಯಾರನ್ನು ವಾಪಾಸು ತೆಗೆದುಕೊಳ್ಳಬೇಕು ಎನ್ನುವುದನ್ನು ಶರದ್ ಪವಾರ್ ಹಾಗೂ ಪಕ್ಷದ ಇತರ ಮುಖಂಡರು ತೀರ್ಮಾನಿಲಿದ್ದಾರೆ ಎಂದು ಅಹ್ಮದ್‍ನಗರ ಜಿಲ್ಲೆಯ ಕರ್ಜತ್-ಜಮಖೇಡ್ ಕ್ಷೇತ್ರದ ಶಾಸಕರೂ ಆಗಿರುವ ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News