ಮತಪತ್ರ ಬದಲು ಇವಿಎಂ ಬಳಕೆಯಿಂದ 2 ಲಕ್ಷ ಮರ ರಕ್ಷಣೆ: ಸಚಿವ ಭೂಪೇಂದ್ರ ಯಾದವ್

Update: 2024-06-29 02:45 GMT

ಹೊಸದಿಲ್ಲಿ: ಇತ್ತೀಚಿನ ಲೋಕಸಭಾ ಚುನಾವಣೆ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ನಿಖರತೆಯನ್ನು ದೃಢಪಡಿಸಿದ್ದು ಮಾತ್ರವಲ್ಲದೇ, ಎರಡು ಲಕ್ಷ ಮರಗಳನ್ನು ಉಳಿಸುವ ಮೂಲಕ ಧನಾತ್ಮಕ ಪರಿಸರ ಪರಿಣಾಮಕ್ಕೂ ಕಾರಣವಾಗಿವೆ ಎಂದು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.

ಇವಿಎಂಗಳ ಬದಲು ಮತಪತ್ರಗಳನ್ನು ಬಳಕೆ ಮಾಡಿದ್ದರೆ ಅಗತ್ಯ ಕಾಗದ ತಯಾರಿಕೆಗಾಗಿ ಎರಡು ಲಕ್ಷ ಮರಗಳನ್ನು ಕಡಿಯಬೇಕಾಗುತ್ತಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ. ಇವಿಎಂಗಳು ವಿರೋಧ ಪಕ್ಷಗಳ ಸುಳ್ಳನ್ನು ಅನಾವರಣಗೊಳಿಸುವ ಜತೆಗೆ ಮರಗಳ ಸಂರಕ್ಷಣೆ ಮೂಲಕ ಹೇಗೆ ದೊಡ್ಡ ಪ್ರಮಾಣದ ಹವಾಮಾನ ಕಾರ್ಯಗಳನ್ನು ಮುನ್ನಡೆಸಬಲ್ಲದು ಎಂದು ತೋರಿಸಿಕೊಟ್ಟಿದೆ ಎಂದು ವಿವರಿಸಿದರು.

ಟೈಮ್ಸ್ ನೆಟ್ವರ್ಕ್ ಆಯೋಜಿಸಿದ್ದ ಹವಾಮಾನ ಶೃಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹವಾಮಾನ ಬದಲಾವಣೆ ಪದೇ ಪದೇ ಹೇಗೆ ಹವಾಮಾನ ವೈಪರೀತ್ಯದ ಸ್ಥಿತಿಗೆ ಕಾರಣವಾಗುತ್ತಿದೆ ಎನ್ನುವುದನ್ನು ವಿವರಿಸಿದರು. ಕಾಕತಾಳೀಯ ಎಂಬಂತೆ ಶುಕ್ರವಾರ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ ಜೂನ್ ತಿಂಗಳ ವಾಡಿಕೆ ಮಳೆಯ ಮೂರು ಪಟ್ಟು ಮಳೆಯಾಗಿದೆ.

ಕೆಲ ಗಂಟೆಗಳ ಧಾರಾಕಾರ ಮಳೆಯಿಂದ ಹಲವು ಪ್ರದೇಶಗಳಲ್ಲಿ ನೀರು ನಿಂತ ಸಮಸ್ಯೆಗೆ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ನಿಷ್ಕ್ರಿಯತೆ ಕಾರಣ ಎಂದು ಸಚಿವರು ಆಪಾದಿಸಿದರು. "ಪ್ರದೇಶಗಳು ಜಲಾವೃತವಾಗಲು ಮುಖ್ಯ ಕಾರಣವೆಂದರೆ ಪ್ಲಾಸ್ಟಿಕ್ ಗಳು ಚರಂಡಿಗಳನ್ನು ಸಿಕ್ಕಿಕೊಂಡಿರುವುದು. ಇದನ್ನು ತಡೆಯಲು ನಮ್ಮ ವೈಯಕ್ತಿಕ ನಡವಳಿಕೆಯಲ್ಲಿ ಬದಲಾವಣೆ ಅಗತ್ಯ. ಇದು ಸ್ಥಳೀಯ ಆಡಳಿತ ವ್ಯವಸ್ಥೆಯ ಕಾರ್ಯದ ಭಾಗವೂ ಆಗಬೇಕು" ಎಂದು ವಿಶ್ಲೇಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News